ಮನಸ್ಸಿಗೆ ಬೇಜಾರಾದಾಗ ಈ ಜೀವನವೇ ಸಾಕು ಎನ್ನಿಸಿಬಿಡುತ್ತದೆ.ಆದರೆ ನಮ್ಮ ಜವಾಬ್ದಾರಿಗಳನ್ನು ನೆನೆಪಿಸಿಕೊಂಡರೆ ಜೀವನ ಹಿಂಗೇ ಅಂತ ಅನಿಸುವುದೂ ಇದೆ. ನಮಗೆ ಎಲ್ಲರಿಗೂ ನಮ್ಮದೇ ಆದ ಕನಸಿನ ಲೋಕದಲ್ಲಿ ಬದುಕಬೇಕನಿಸುವುದು ನಿಜ ಆದರೆ ನೈಜ ಜೀವನ ಬರೀ ಕಲ್ಪನೆ, ಭ್ರಮೆಯಲ್ಲ. ವಾಸ್ತವದಲ್ಲಿ ನಾನು ನನ್ನದು ಎಂದು ಎಷ್ಟೇ ಹಾರಾಡಿದರೂ ಭಗವಂತ ಹಣೆಯಲ್ಲಿ ಅವರವರ ಪಾಲಿಗೆ ದಕ್ಕುವುದು ಇಷ್ಟು ಎಂದು ಬರೆದಿರುತ್ತಾನಂತೆ. ನಾವು ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದೇವೆ ಎಂಬ ನಂಬಿಕೆ ನಮ್ಮಲ್ಲಿದ್ದರೆ ಇತರರ ಮಾತಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ. ಎಲ್ಲವನ್ನೂ ಸಹಿಸುವ ಗುಣವಿದ್ದವರಲ್ಲಿ ಸಮಸ್ಯೆ ಮೆಟ್ಟಿ ನಿಟ್ಟುವ ಸ್ಟೈರ್ಯವಿರುತ್ತದೆ. ನಮಗೆ ಅವಶ್ಯವಿರುವಾಗ ಪಡೆದದ್ದು ಚಿಕ್ಕದಾದರೂ ಅಮೂಲ್ಯವಾಗಿರುತ್ತದೆ. ಕೊಟ್ಟವರನ್ನು ಮರೆಯಬಾರದು.
ಹೆದರಿ ನಿಂತರೆ ನಿಂತೇ ಇರುತ್ತೇವೆ ನಿಲ್ದಾಣದಂತೆ; ಮುನ್ನಡೆದರೆ ಆ ಪ್ರಯಾಣವೇ ಉಜ್ವಲ ಜೀವನ. ಮನುಷ್ಯ ತನ್ನ ಗುಣ ನಡತೆಯಿಂದ ದೊಡ್ಡವನಾಗಬಲ್ಲ ಹೊರತು ಆಸ್ತಿ ಹಣ ಅಂತಸ್ತಿನಿಂದಲ್ಲ ಎಂಬುದು ಮನದಲ್ಲಿರಲಿ, ನಮ್ಮ ಗುರಿ ಮುಟ್ಟುವುದಕ್ಕೆ ಉಪಯೋಗವಾಗುವ ಪ್ರತಿಕೆಲಸ ತ್ರಿಕರಣ ಶುದ್ಧಿಯಿಂದ ಮಾಡಬೇಕು.
ಇತ್ತೀಚಿಗೆ ಓದಿದ ಸಾಲುಗಳಲ್ಲಿ ತುಂಬಾ ಹಿಡಿಸಿದ ಹಾಗೂ ತುಂಬಾ ಸಮಾಧಾನ ಕೊಟ್ಟ ಸಾಲುಗಳು -
ಕಾಣುವ ಕನಸಿಗೂ ಮೂಡುವ ಕಲ್ಪನೆಗೂ
ಮುಂದಿನ ದಾರಿಯಾಗಲಿ ಪ್ರಶಾಂತ
ಕಾಣದ ಬದುಕಿಗೂ ಮುಂದಿರುವ ವಾಸ್ತವಕೂ
ಸಿದ್ಧವಿರಲಿ ಮನವೆಂದಿಗೂ ಶಾಂತ
ಮಧುರ ಭಾವನೆಯ ಸುಳಿಯ ಸಿಲುಕದೇ
ಸಾಗುತಿರಲಿ ಪಯಣ ಪ್ರಶಾಂತ
ತಲ್ಲಣಿಸದೇ ಮನವಿರಲಿ ಎಂದಿಗೂ
ಬಿಳಿಹಾಲ ನೊರೆಯಂತೆ ಶಾಂತ.
ಭಾವನೆಗಳ ಗೂಡಲ್ಲಿ
ಬಗೆದಷ್ಟು ಹಾಡು
ಈ ಪ್ರೀತಿ ಒಲವೆಲ್ಲ
ಮೊಗೆದಷ್ಟು ನೋಡು.