Total Pageviews

Sunday 1 December 2013

ಪ್ರೀತಿ ಹಕ್ಕಿ



ನಿನ್ನ ಪ್ರೀತಿಯ ಹಕ್ಕಿ 
ಎನ್ನ ಜೀವದೊಳಹೊಕ್ಕಿ 
ತೆರೆಸಿತಲ್ಲವೋ ಇನಿಯ 
ನನ್ನಾಸೆಗಳೆಲ್ಲವ ಕುಕ್ಕಿ 

ನಿನ್ನ ಹೃದಯದ ಪುಟಕೆ 
ಮನದ ಭಾವನೆ ಬೆರೆಸಿ 
ಬರೆದೆ ಒಲುಮೆಯ ಕವನ 
ನಿನ್ನ ಒಲವನು ಬಯಸಿ 

ಮಾತು ಮೌನವಾಗುವ ತನಕ
ಹೃದಯ ಬಡಿತ ನಿಲ್ಲುವತನಕ 
ಈ ಜೀವ ಮಣ್ಣಿಗೆ ಸೇರುವ ತನಕ 
ಕೊಡಲಿ ಗೆಳೆಯ ನಿನ್ನ ಪ್ರೀತಿ 
ನನ್ನ ಮನದಲಿ ಪುಳಕ..
         -- ಮೌನವೀಣೆ

Wednesday 30 October 2013

ಬೇಸರ




ಏಕೋ ಏನೋ ಮನಕೆ 
ಇಂದು ಗಾಯವಾಗಿದೆ 
ತೆರೆದು ನೋಡಲು 
ನನ್ನ ಹೃದಯ ಮಾಯವಾಗಿದೆ

ನಿನ್ನ ಪ್ರೀತಿ ಪಡೆದ ಜೀವ 
ಮುನಿಸ ತೋರಿದೆ 
ನಿನ್ನ ಸನಿಹ ಬೇಕು ಎಂದು 
ನನ್ನ ಕಾಡಿದೆ 

ಎಂದು ಬರುವೆ ಏನ ತರುವೆ 
ನನಗೆ ಹೇಳದೆ 
ಅಪ್ಪಿ ಬಿಟ್ಟು ಪಪ್ಪಿ ಕೊಡುವೆ       
ಮಾತೇ ಆಡದೆ
     
       -- ಮೌನವೀಣೆ

Thursday 19 September 2013

ನನಗೆ ಪ್ರೀತಿಯಾಗಿದೆ!!!


ಮನಕೆ ಕಚಗುಳಿಯಾಗಿದೆ 
ಪ್ರಾಣಪಕ್ಷಿಯು ಕೂಗಿದೆ
ಒಲವ ಕನಸದು ಕಾದಿದೆ 
ಹೃದಯ ಪಲ್ಲವಿ ಹಾಡಿದೆ 
ಅಪರೂಪದ ಸಂಭ್ರಮ ತುಂಬಿದೆ 
ಸ್ವಾರ್ಥ ಗೋಪುರ ಕಳಚಿದೆ
ಮೌನ ಮಾತುಗಳಾಡಿದೆ 
ಗಗನ ಭೂಮಿಗೆ ಜಾರಿದೆ 
ಏನು ಕಾರಣ ಕೇಳಿದೆ?? 
ನಾಚಿ ಹೇಳಿದೆ ನಾನು..
ಅಂತೂ ಇಂತೂ ನನಗೆ 
ಪ್ರೀತಿಯಾಗಿದೆ!!

     --ಮೌನವೀಣೆ

Wednesday 21 August 2013

ಇನಿದನಿ




ಇಂಪಾದ ಗಾನ ಕೇಳಿದಾಗೆಲ್ಲ
ಇನಿಯಾ ನಿನ್ನ 
ಇನಿದನಿಯ ಪಿಸುಮಾತು 
ಇಂಚಿಂಚಾಗಿ
ಇಳಿದು ಮನದೊಳಗೆ 
ಇಬ್ಬನಿಯ ಶುಷ್ಕದಲಿ
ಇಷ್ಟಿಷ್ಟೇ ತೋಯ್ದು ತೇವವಾದಂತೆ 
ಇಮ್ಮಡಿಸಿದವು ಆಸೆಗಳ
ಇಂಚರವಾಗಿ. . 


ಕಲ್ಪನೆಗಳ ಕವನಗಳು 
ಕನವರಿಕೆಯ ಕನಸುಗಳು 
ಕವಲೊಡೆದು ಕಾಡಿ 
ಕಟ್ಟಿಬಿಟ್ಟವು ಕಾಮನಬಿಲ್ಲ 
ಕನ್ನಡಿಯ ಅಂಚಲ್ಲಿ 
ಕಣ್ ಕೊರೈಸುವಂತೆ 
ಕದಡಿ ಹಲವು ಬಣ್ಣವಾಗಿ..  


ನೀ ಕೇಳಿದ ಒಗಟು
ನಿನ್ನಾಪ್ತತೆಯ ಭಾವುಕತೆ
ನೀಕೊಟ್ಟ ಮಾತು  
ನೀ ಬೆಸೆದ ಬಾಳ ಭಾಂದವ್ಯ
ನಿಸ್ವಾರ್ಥ ತುಂಬಿದ ಪ್ರೇಮ
ನಿನ್ನಾಗಿಸಿದೆ ನನ್ನ
ನಿಸ್ಸಂಶಯವಾಗಿ..

Thursday 25 July 2013

ಮನಸು ತುಂಬಿದೆ



ಮನತುಂಬ ಸವಿಗನಸು
ಎದೆತುಂಬ ಭಾವೋನ್ಮಾದ
ಹೊಸದೆನಿಸಿದೆ ಈ ಜಗವು
ಬಣ್ಣವಾಗುತಿದೆ ಬದುಕು
ಸೊಗಸೆನಿತಿಸುದೆ ಈ ಭೂಮಿ
ಆಪ್ತವೆನಿಸಿವೆ ಸಂಬಂಧಗಳು
ಅನಿಸುತಿದೆ ಬದಲಾವಣೆ
ನನ್ನ ತುಂಬಾ......

ಜೊತೆಗಾರನ ಬಾಂಧವ್ಯ
ಅಭಿಮಾನದಕ್ಕರೆಗಳು
ವಾತ್ಸಲ್ಯದಾಳದ ಮಮತೆ
ಕಣ್ಣು ತುಂಬುವ ಪ್ರೇಮ
ಒಟ್ಟಾಗಿ ಕಟ್ಟಿಕೊಟ್ಟಿವೆ
ನೂರ್ಮಡಿಸುವ 

ಗಗನ ಚುಂಬಿಸುವ
ಚೈತನ್ಯ ನನ್ನ ತುಂಬಾ......

ಸತ್ಯ-ಮಿಥ್ಯಗಳ
ಹಿರಿಮೆ-ಅರಿವಿನ ಗೋಜು
ಜಗದಳಲ ಗೊಂದಲಗಳು
ಬೇಡವೆಂದಿದೆ ಅಂತರ್ಯ
ಮರೆತಿರುವೆನೇ ನಾನು
ಜಗದ ಪರಿವ??!!
ಒಲವ ಕಾರ್ಮೋಡ ಕವಿದಿದೆ
ಈಗ ನನ್ನ ತುಂಬಾ......

ಹೃದಯದಲಿ ಪ್ರೀತಿ ಗುಪ್ತಗಾಮಿನಿಯಂತೆ
ಕನವರಿಸುತಲಿ ಹರಿಯುತಿದೆ.
ಬಾನ ಚಂದ್ರನ ಬೇಟಿಗೆ
ಮುಸ್ಸಂಜೆಯಲಿ ಕಡಲು ಹದವಾಗಿ ನಲಿದಂತೆ
ತಲ್ಲಣಿಸಿ ಕಾತರಿಸಿ..
ಅವನು ಬರುವಾ ಹೊತ್ತು
ಹೆಸರಿಲ್ಲದ ಪುಳಕಗಳು
ನನ್ನ ತುಂಬಾ......

Wednesday 3 July 2013

ಮೊದಲ ಮಾಸ

















ಮಧುರ ಮೈತ್ರಿಯ 
ಸವಿಮಧುವಿನ ಸಿಹಿಯ ಮೆಲ್ಲುತ್ತ 
ಮೆಲ್ಲನೆ ಜಾರಿದೆ ಮೊದಲ ಮಾಸ 
ಒಲವ ಮಾಧುರ್ಯದ ಕ್ಷಣಗಳು 
ಮನದ ಆಳದಿ ಮೌನ ಕೇಳಿದೆ 
ಕಳೆದುಹೋಯಿತೆ! 
ಮದುವೆಯಾಗಿ ತಿಂಗಳು!!?
ದಿನ ಕಳೆದಿದೆ ಕ್ಷಣದಂತೆ 
ಬಾಳ ನಂಟುಗಳೆಲ್ಲ ಗಂಟಾಗಿ 
ಒಟ್ಟಾಗಿ ಸುತ್ತಿದೆ 
ಅನುರಾಗ -ಅಭಿಮಾನ ಮಮತೆಯ 
ಕಡಲಿನ ಕಟ್ಟೆ ತನ್ನೊಳಗೆ ಒಡೆದಿದೆ
ಭಾವಗಳು ಪರವಶವಾಗಿ 
ಬಣ್ಣದೊಕುಳಿಯಾಗಿವೆ 
ಬದುಕಿನ ಪೂರ್ಣತೆಯ 
ಸಾರ್ಥಕ್ಯದೆಡೆಗೆ 
ಹಜ್ಜೆಗೆ ಗೆಜ್ಜೆ 
ಘಲ್ಲೆನ್ನುತ ಸಾಗಿದೆ 
ಪ್ರೀತಿ ರಾಘವನ ಒಲವಿನ 
ಕೊಳಲ ಹಾಡಿಗೆ ಮೌನವೀಣೆ
ಹಿತವಾಗಿ ನವಿರಾಗಿ ಮೀಟಿದೆ 

           -- ಮೌನವೀಣೆ



Thursday 23 May 2013

ಸಾರ್ಥಕ ಬದುಕು



ನೀರಲ್ಲಿ ಅರಳಿದ
ಬಿಳಿಕಮಲದ ಮೊಗ್ಗೊಂದು
ನೂರ್ಮಡಿಸುವ ಆಸೆಯ
ಹೊತ್ತು ಅರಳುತಿದೆ ಬಿರಿದು
ಪಕಳೆಯಲಿ ನಸುಗೆಂಪು
ತನ್ನೊಳಗೆ ಹೊಸಕಂಪು
ತಂಗಾಳಿಯ ಹಿತಸ್ಪರ್ಷಕೆ
ನಗುನಗುತ ತಲೆದೂಗಿ
ಹೇಳಿದೆ ಭಾಸ್ಕರಗೆ ಶುಭೋದಯ..

ಬುಡದಲ್ಲಿ ಕರಿಗೆಸರು
ಸುತ್ತೆಲ್ಲ ಬಳ್ಳಿಗಳ ಅಡರು
ನಡುವಲ್ಲಿ ಪುಟ್ಟ
ಜೀವಿಗಳ ಸಂತಾನ
ಪರೋಪಕಾರಿಯು ಅಹುದು
ಹೂಗಳ ಅರಸಿ.

ಅಲೆಗಳ ಕುಲುಕಾಟ
ದೋಣಿಗಳ ತಿರುಗಾಟ
ಕೀಟಗಳದ್ದಂತೂ ಎಲೆ ಹೂವ
ಕೊರೆಯುತ ಆಹಾರದ ಹುಡುಕಾಟ
ಕ್ಷಮೆಯಾ ಧರಿತ್ರಿಯ ಮಗಳೇ
ನೀ ಸೌಖ್ಯಕಾರಿಣಿ.!

ಸೌಂದರ್ಯದ ರಾಶಿ ನೀ;
ರೂಪದಲಿ ರಾಣಿ .
ಸುರ-ದೇವತೆಗಳ ಆಸನವು
ನೀ ಚಂದ್ರಮುಖಿ
ಕ್ಷಣಿಕ ಬದುಕಲೂ ಪಡೆವೆ
ಸಾರ್ಥಕ್ಯದ ಪರಿಪೂರ್ಣತೆಯ
ಓ ಕಮಲವೇ ನೀ ನಿಜಕ್ಕೂ ಸೌಭಾಗ್ಯವತಿ.


                                 --- ಮೌನ ವೀಣೆ
ಚಿತ್ರ ಕೃಪೆ - ಅಂತರ್ಜಾಲ

Monday 22 April 2013

ಬೆಳ್ಳಿ ಕಾಲೆಜ್ಜೆಗಳು




ಬೆಳ್ಳಿ ಹಿಮದೆದೆಯಲ್ಲಿ
ಬೆಚ್ಚಗಿನ ಪಾದವು ಸೋಕಲು
ಅಚ್ಚಾಯಿತು ಹೆಜ್ಜೆಯ ಗುರುತು
ಮೆಚ್ಚುಗೆಯ ಒಪ್ಪಿಗೆಯಂತೆ.

ಕುಡುಗುಡುವ ಚಳಿಗಾಳಿಯಲಿ
ಹೆಪ್ಪುಗಟ್ಟಿದ ಹಿಮಗಡ್ಡೆಗಳು
ಸಕ್ಕರೆಯ ಮಳೆಯಂತೆ
ಮುತ್ತಂತೆ ಬುವಿಗಿಳಿಯಲು
ಸ್ವರ್ಗ ಅನಿಸಿತು ಧರೆಯು
ದಂಗಾದೆ ಕ್ಷಣದಲ್ಲಿ!!

ಎನಿತು ಸೊಭಗಿನ ಧರಣಿ
ಎಲ್ಲಿ ನೋಡಿದರಲ್ಲಿ ತುಂಬಿ-
ತುಳುಕಿದಂತಿದೆ ಬಿಳಿಮಣಿ
ಮುಂದೆ ಸಾಗವ ಮನಸಲಿ 
ಇನ್ನಷ್ಟು ಮತ್ತಷ್ಟು...
ಬೆರಗುಗಳ ತುಡಿತಗಳು!!?

ಇನ್ನಷ್ಟು ಮುನ್ನಡೆವೆ
ಕಣ್ತುಂಬಿ ಮನತುಂಬಿ
ಸಂತಸದಿ ಕುಣಿದು
ಭೂರಮೆಗೆ ಮಣಿದು
ಆನಂದದಿ ನಾ ಹೇಳ್ವೆ
ನಾ ಮುಂದೆ ಬರುವೆ; ನನ್ನೊಳಗೆ ನಲಿವೆ
ಈ ಜಗವ ಮರೆವೆ..
ಇನ್ನೂ ಅನಿಸುತಿದೆ..

             --  ಮೌನ ವೀಣೆ
...............

ಮಯೂರ ಚಿತ್ರ ಕವನ ಸ್ಪರ್ಧೆಗಾಗಿ ಬರೆದದ್ದು, ಈ ತಿಂಗಳ ಮಯೂರ ಪತ್ರಿಕೆ ಪರೀಕ್ಷಿಸಲಿಲ್ಲ. ಪ್ರಶಸ್ತಿ ಗೆದ್ದಿಲ್ಲ ಅನಿಸತ್ತೆ. ಬಹುಮಾನ ಗೆದ್ದರೆ ಕಳಿಸುತ್ತಿದ್ದರು ಅಲ್ಲವೇ ? :-) ಆದರೆ ನನ್ನ ಬ್ಲಾಗಿನ ಬಂಧುಗಳಿಗಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸಿದ್ದೇನೆ. ಇದು ನಮ್ಮ ಪ್ರಕಾಶಣ್ಣನವರ ಚಿತ್ರ. ಅವರ ಅದ್ಭುತ ಚಿತ್ರ ಹವ್ಯಾಸಕ್ಕೆ ನನ್ನಕಡೆಯಿಂದ ಜೈ ಹೋ ಧನ್ಯವಾದ

Thursday 4 April 2013

ಬಿಸಿ summerಗೊಂದು belated ಸ್ವಾಗತ




ಆಹಾ!! ಒಂದ್ ಚೊಲೊ ಗಾಳಿ ಬಂತ್ ಜೀವ ಬಂದಂಗ್ ಆಯ್ತಪ್ಪಾ... ಹೂಂ... ಸುಡು ಬೇಸಿಗೆಯ ಝಳ ಶುರುವಾಗುತ್ತಿದೆ. ಊಫ್.. ಊಸ್.. ಅಂತ ಕೈಲೊಮ್ಮೆ, ಸೆರಗಲ್ಲೊಮ್ಮೆ, ಕರ್ಚಿಪಲ್ಲೊಮ್ಮೆ, ಕೈಗೆ ಸಿಕ್ಕ invitations, ರಟ್ಟು-ಪೇಪರಗಳಲ್ಲೊಮ್ಮೆ ಗಾಳಿ ಬೀಸಿಕೊಳ್ಳುತ್ತ..  ವಾತಾವರಣದಲ್ಲಿ ಒಂಚೂರು ತಂಪಿಲ್ಲ ಕಣ್ರೀ.. ಈ KEB ಅವ್ರು ಎಲ್ಲಿ ಹಾಳಾಗಿ ಹೋದ್ರೋ ಏನೋ!!! ಪ್ಯಾನ್ ಹಚ್ಕೊಂಡು ಕುರೋಣ ಅಂದ್ರೆ ಕರೆಂಟ್ ತೆಕ್ಕೊಂಡು ಕಾಡ್ತಾರೆ. ನಮ್ಮ ಮಗಂದು/ಮಗಳಿಂದು exam ನಡೀತಿದೆ. ಪಾಪದ ಕೂಸು ಓದ್ಕೊಬೇಕ್ ಸುಸ್ತ್ ಆಗುತ್ತೆ ಅದಿಕ್ಕೆ ಮೇಲಿಂದ ಲೈಟ್ ಬೇರೆ ತೆಗಿತಾರೆ.. ಹೀಗೆ ಸಾಮಾನ್ಯವಾಗಿ ಸುತ್ತ-ಮುತ್ತ ಕೇಳಿಬರೋ ಮಾತುಗಳು. ಜೊತೆಗೆ ಒಂದಷ್ಟು simpaty. ಬಿಸಿಲಿನ ಬೇಗೆಗೆ ಒಂದ್ ಸ್ವಲ್ಪ ಮೈಬಿಸಿ, exam ಬರ್ಯೊ ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಬಿಸಿ, ರಾಜಕೀಯದವರಿಗೆ ಚುನಾವಣೆಯ ಬಿಸಿ, ಒಂದ್ ಹಂತ ಪರೀಕ್ಷೆ ಮುಗಿಸಿಕೊಂಡೋರ್ಗೆ ಟ್ಯೂಶನ್ ಕ್ಲಾಸ್, ಸಮ್ಮರ್ ಕ್ಯಾಂಪಗಳ ಬ್ಯುಸಿ scheduleಗಳ ಬಿಸಿ, ಇನ್ನು work ಮಾಡೋರಿಗೆ ಕೆಲಸದ ಒತ್ತಡದ ಬಿಸಿ ಜೊತೆಗೆ ಮಾರ್ಚ್ end ಮುಗಿತು ಈ ಏಪ್ರಿಲ್ ನಲ್ಲಿ hike ಮಾಡ್ತಾರೋ ಏನೋ ಎಂಬ ಒಂದಸ್ವಲ್ಪ  ತಲೆಬಿಸಿ, ಹೀಗೆ ಅದೂ ಇದು ಅಂತ ವಾತಾವರಣ fulllll  ಬಿಸಿ ಕಣ್ರೀ.. ಒಟ್ನಲ್ಲಿ ಬಿಸಿ start up. Anyway ಈ ಬೇಸಿಗೆಯನ್ನು late ಆದ್ರೂ latest ಆಗಿ ಸ್ವಾಗತಿಸೋಣ..

ಸೆಕೆ ದಿನಗಳ ತಾಪ
ಭರಿಸುತಿದೆ ತೀರದ ಬಾಯಾರಿಕೆಯ
ಆಸೆಪಟ್ಟು ಜೀವ ಬೇಡುತಿದೆ
ತರಾವರಿಯ ಮಿಲ್ಕ್ ಶೇಕುಗಳ
ಗಂಟೆಗೊಮ್ಮೆ ...
ತರಿಸುತಿದೆ ಪ್ಯಾನಿನ ಬಿಸಿಗಾಳಿ
slice maazaಗಳ ನೆನಪ
ಸ್ವಾಗತಿಸುವ ಬೇಸಿಗೆಯ
cold ಕಾಫಿ ಕುಡಿಯುತ್ತ..



Happy Summar...

                                                           --ಮೌನ ವೀಣೆ
ಚಿತ್ರಕ್ರಪೆ - ಅಂತರ್ಜಾಲ

Monday 1 April 2013

ಕನಸಿನ ಮೌನಕ್ಕೊಂದು ಮಾತು ಬಂದಾಗ..











ಮಾತು ಬರದ ಮೌನಕ್ಕೆ ಕನಸಾದ ಬಗೆಯ ಒಂದು ಚಿಕ್ಕ ಕನಸಿನ ಕತೆ. ಹುಚ್ಚುಕೋಡಿಯ ತಲೆಯೊಳಗೆ ಚಿಕ್ಕದೊಂದು ಆಸೆಯ ಭಾವ, ಬಯಸುವ ಮನಸ್ಸಲ್ಲಿ, ನೆನೆಯುತ ಮಲಗಿದಲ್ಲಿ ಬೀಳುವುದು; sometime ಕಾಣೋದು ಅದೇ ಕನಸು, ಭ್ರಮಿಸಿಕೊಳ್ಳೋದು ಅದೇ ಅಂದರೂ ತಪ್ಪಾಗದು. ನಾವು ಎಂತಹ ಮರೆಗುಳಿ ವಂಶದವರೆಂದರೆ ಒಮ್ಮೊಮ್ಮೆ ಒಂದು ವಿಚಾರದ ಬಗ್ಗೆ ಚಿಂತಿಸಿ ನಿರ್ಧಾರ ತೆಗೆದುಕೊಳ್ಳಲು ಹಾಗೆ ಕಣ್ಮುಚ್ಚಿ  ಕುಳಿತು ಧ್ಯಾನಸ್ಥ ಸ್ಥಿತಿ ತಲುಪಿ ಆದರೆ-ಹೋದರೆ ಎಂಬ ಆಗು-ಹೋಗುಗಳ ಹತ್ತು ವಿಚಾರಗಳಲ್ಲಿ ಮುಳುಗಿ ನೈಜ ವಾಸ್ತವದ ವಿಚಾರ ಮರೆತು ಹೊಸದಾಗಿ ಬಂದ ಯೋಚನೆಗಳಿಗೊಂದು ಅಂತ್ಯ ಹಾಡಲು ಉದ್ಯುಕ್ತರಾಗಿ ಬಿಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ದಾಸರ ಒಂದು ಹಾಡು ನೆನಪಿಗೆ ಬರುತ್ತದೆ - ಈ ಮಾನವರು ಹೇಳುವುದು ಒಂದು ಮಾಡುವುದು ಇನ್ನೊಂದು ನಂಬೋದು ಹೇಗೆ ಕಾಣೆ ಪದ್ಮಾವತಿ ಪತಿ ತಿರುಪತಿ ಶ್ರೀವೆಂಕಟಚಲಪತಿ.. ಅಂತ.

ಒಮ್ಮೊಮ್ಮೆ ನನ್ನೊಳಗಿನ ಕಿಚ್ಚು ಹುಚ್ಚು ಅನಿಸಿಬಿಡುತ್ತದೆ. ಮನದೊಳಗೆ ಮೂಡಿದ ಭಾವನೆಗಳೂ ಭಾರ ಎನಿಸಿಬಿಡುತ್ತದೆ. ಮಾತಾಡುವ ವಾಚಾಳಿಯ ನಾಲಿಗೆ ಕೂಡ ಹೊರಳಲು ನರಳುತ್ತದೆ ಒಮ್ಮೊಮ್ಮೆ ತಾನಾಗಿ ಶಕ್ತಿ ತುಂಬಲು ಬಂದ ಉಸಿರನೂ ಕೂಡ ಹೊರದಬ್ಬಲು ಕಷ್ಟವೆನಿಸಿಬಿಡುತ್ತದೆ. ಅತ್ತು ಬಿಟ್ಟು  ಈ ತನುವಿನ ಕಷ್ಟ ಕಳೆಯೋಣವೆಂದರೆ ಹಾಳಾದ ಕಣ್ಣಿರು ಕೂಡ strike  ಮಾಡಿಬಿಡುತ್ತದೆ.  ಒಮ್ಮೊಮ್ಮೆ ನಮ್ಮೊಳಗಿನ ನಾನೆಂಬ ಸ್ವಾರ್ಥದ ಸ್ವಾಭಿಮಾನ ಹೆಮ್ಮೆ ಎನಿಸುತ್ತದೆ. ಒಮ್ಮೊಮ್ಮೆ ಸಂಗಾತಿ ಜೊತೆಗಾರನಿಲ್ಲವೆಂದು ಮರುಗುವ ಮನಸ್ಸು ಸುತ್ತಣ ಸಂಸಾರದ ಸಂಘರ್ಷಗಳ ನೋಡಿ single life has great comfort ಎಂದು ಎದೆಯುಬ್ಬಿಸಿ ತನ್ನೊಳಗೆ ಬೀಗಿಬಿಡುತ್ತದೆ. ಒಮ್ಮೊಮ್ಮೆ ಸತ್ಯ ಒಪ್ಪಿಕೊಳ್ಳಲು ಮನಸಾಲಾಗದೆ ಮಿಥ್ಯವೆಂದು ಸಾಧಿಸಿಬಿಡೋಣ ಎಂದೂ ಅನಿಸುವುದುಂಟು. ಒಮ್ಮೊಮ್ಮೆ ತೀರಾ ಚಿಕ್ಕ -ಪುಟ್ಟ ಗೆಲುವಿಗೂ ನಲಿಯುವ ಮನಸ್ಸು ದೊಡ್ಡ ಗೆಲುವಾದರೂ ಅಂತರ್ಮುಖಿಯಾಗಿಬಿಡುತ್ತದೆ. ಒಮ್ಮೊಮ್ಮೆ ಜೀವನ  ಸಹಜ -ಸುಂದರ, ಅದ್ಭುತ!!. ಈ ಸಂಬಂಧ - ಬಾಂಧವ್ಯಗಳು ಎಷ್ಟು ಖುಷಿಯಾಗಿಸುತ್ತಪ್ಪಾ ಎಂದು ಉಬ್ಬಿ ಬಿಡುವ ನಾವುಗಳು; ಒಮ್ಮೊಮ್ಮೆ ತುಂಬಾ ವೇದಾಂತಿ ತತ್ವಜ್ಞಾನಿಯಂತೆ ಏನಿದೆ ಜೀವನದಲ್ಲಿ ಹುಟ್ಟು-ಸಾವುಗಳು ನಡುವಲ್ಲಿ ಸ್ವಲ್ಪದಿನ(ಜಟಕಾಬಂಡಿ) ಒಂದಷ್ಟು ಸ್ವಾರ್ಥ ದುರಾಸೆಗಳ ಜಂಜಾಟದ ಜಗಳಗಳು, ತುತ್ತಿಗಾಗಿ ಒಂದಷ್ಟು ಓದು - ನೌಕರಿ - ಪೆನ್ಷನ್ - ಲೈಫ್ settlement ಹೀಗೆ ಒಂದಷ್ಟು ಬದುಕಿನ ಹೋರಾಟ. ಇಷ್ಟಾದ ಮೇಲೂ ಈ ಜೀವನ ನಶ್ವರ; ಒಮ್ಮೊಮ್ಮೆ ನಾವು ಮನುಷ್ಯರಾಗಿದ್ದೇವೆ, ನಮಗೆ ನಮ್ಮದೇ ಒಂದಷ್ಟು ಸ್ವಾತಂತ್ರ್ಯ, ಮಾತುಗಳು ಬರ್ತಾವೆ, ಹಲವು ಭಾಷೆಗಳಲ್ಲಿ ಬರಿತೇವೆ, ಟೆಕ್ನಾಲಜಿ ಬೆಳೆಸಿದ್ದೇವೆ, ಕಂಪ್ಯೂಟರ್, ಮೊಬೈಲ್, ಉಪಗ್ರಹಗಳು ಅದೂ ಇದೂ ಒಂದಷ್ಟು ಮಣ್ಣು ಮಸಿ ಕಲ್ಪಿಸಿಕೊಂಡು ನಾವು ಲಕ್ಕಿಗಳು, ಬುದ್ದಿಜೀವಿ, ಶ್ರೇಷ್ಟರು ಎಂದು ಬಿರುದು ಕೊಟ್ಟು ಕೊಂಡು ಬಿಡುತ್ತೇವೆ. ಒಮ್ಮೊಮ್ಮೆ ಏನಪ್ಪಾ..??! ನಾವು ಒಂಥರಾ ಅವಲಕ್ಕಿಗಳೇ!! ಎಲ್ಲೆಡೆಯೂ ಸ್ವಾರ್ಥ, ಮೋಸ, ಕಪಟತನ, ಈ
ಹೊಲಸು ಪ್ರಾಣಿಗೆ ಇರುವಷ್ಟು ದುರಾಸೆ ಬೇರಾವ ಜೀವ ಪ್ರಭೇದಗಳಲ್ಲು ಇಲ್ಲವೆಂದೆನಿಸಿ ನಾವೇ ಹುಂಬರು, ಮೂರ್ಖರು ಎಂದೆನಿಸುವುದೂ ಉಂಟು. 

ಆಸೆಗಳು ಆಕಾಶದ ಹಾಗೆ. ಹಿಡಿಯಲಾಗದ ಹೊಳೆಯುವ ಗಂಟು. ಅದಕ್ಕಾಗಿಯೆ ಜನ ಆಕಾಶ ನೋಡಿ ಹತ್ತು ಹಲವು ಕಲ್ಪಿಸಿಕೊಂಡು ಕನಸಿನ ಪುಷ್ಪಕ ಕಟ್ಟುತ್ತಾರೆ. ತಾರೆಗಳ ಜೊತೆ, ಚಂದ್ರನ ಜೊತೆ ಸೇರುವ ಗೆಳೆತನದ ಅನುಭೂತಿಯ ಭಾವ ಹೊಂದುತ್ತಾರೆ. ಕಲ್ಪನೆಯ ಪ್ರೀತಿಸಿ, ಮೋಹಿಸುತ ಆರಾಧಿಸಿ ಕನಸಿನ ಬೃಂಗವ ಏರಿ ಕವಿ ಎನಿಸಿಕೊಂಡುಬಿಡುತ್ತಾರೆ. ರಕ್ತ ಒತ್ತುವ ಹೃದಯದಲ್ಲಿ ರಂಗೋಲಿ ಬರೆದು ಅವರು ಬಯಸುವ ಪ್ರೇಮದ ವಸ್ತುವ ಬರಮಾಡಿ ಕಲ್ಪನೆಯ ಕನಸಲ್ಲಿ ಕಳೆದುಹೋಗುತ್ತಾರೆ. ಅಯ್ಯೋ.. !!!  ಸಾಕಲ್ಲವೇ?? ಎಷ್ಟು ಅಂತ ಕಲ್ಪಿಸಿಕೊಂಡು ಕನಸ್ ಕಾಣೋದ್ ಹೇಳಿ?? ಕೆಲಸವಿಲ್ಲದಿದ್ರೆ ಆಗೋದ್ ಇದೆ ಅಲ್ಲವೇ ?? ಮತ್ತೇನಾಗುತ್ತೆ??


ಹಸಿರಾಗಿರಲಿ ಬದುಕು ಖುಷಿಯಲ್ಲಿ ಕರಗಿ..
ನೂರ್ಮಡಿಸಿ ಚಿಮ್ಮುತಿರಲಿ ಕನಸುಗಳ ಹುಚ್ಚಾಸೆಯ ಅಲೆಗಳು...


ಒಂದು ಪುಟ್ಟ ಆಸೆಯ
ಕನಸು
ಕನಸೊಳಗೆ ಕನಸುಗಳಿಗೆ
ಕಾವ್ ಕೊಟ್ಟು
ಹೊಸದತ್ತು ಕನಸುಗಳ
ಹುಟ್ಟಾಕಿ ಕನಸಲ್ಲಿ
ಆ ಕನಸಲ್ಲಿ ಹೊಸ
ಆಸೆಯ ಕನಸಿನ ಬೀಜ
ತಂತಾನೆ ಮೊಳೆತು ಸಸಿಯಾಗಿ
ಗಳಿಗೆಗಳಿಗೆಗಳೊಳಗೆ ಬೆಳೆಬೆಳೆದು
ಹೆಮ್ಮರವಾಗಿ ಆ ಕನಸೇ
ತನ್ನೊಳಗೆ ತನ್ನ ಕನಸನು
ಬೆಳೆಸುವ ಹುಚ್ಚಾಸೆಯ
ಇನ್ನೊಂದು ಕನಸನು ಕಂಡು
ಕಣ್ತೆರೆವ ಮನಸಿರದೆ
ಕನಸಾಗುತಿರುವಾಗ
ವಾಸ್ತವದ ನೆನಪ ಬರಿಸಿತು
ನನ್ನ ಹಿತ ಬಯಸುವ ಶತ್ರು
ಅಲರಾಂನ ಗಂಟೆ ಹೊಡೆದುಕೊಳ್ಳಬೇಕೆ??!!
ಗಂಟೆ ಏಳಾಯಿತು ಎಂದು
ಪಕ್ಕದ ಮನೆಯ ಆಂಟಿ
ಟ್ಯೂಶನ್ ಗೆ ಮಗನ ಕಳಿಸಿ
ಟಾಟಾ ಮಾಡುವ ಸೌಂಡು ಕಿವಿಗೆ
ಅಪ್ಪಳಿಸಿದಾಗಲೇ ನೆನಪಾದ್ದು
Sunday ಅಲ್ಲ ಇಂದು Monday ಎಂದು
.


HaPPy TiMeS....
         EnJoY ThE SwEeT DrEaMs..

Sunday 3 March 2013

ನನ್ನವಳು


ನನ್ನವಳು ಹೂರಾಣಿ
ನಾನವಳ ಆರಾಧಕ
ಆಸ್ವಾದಿಸುತ ಆಘ್ರಾಣಿಸುತ
ಆಧರಿಸುತ ಸವಿಯಬೇಕು ಅವಳ
ಸೌಂದರ್ಯದ ಸಿರಿಯ
ಬಿಂಕ ಬೆಡಗಿನ ಒಯ್ಯಾರದ ಪರಿಯ
ಹೇಳುವಾಸೆಯು ನನಗೆ ಬೆರಗುಕಂಗಳಲಿ-
"ಕಂಡಿಲ್ಲ ಜಗದಲ್ಲಿ ನಿನಗಿಂತ ಸುಂದರಿಯ!!"

ನನ್ನವಳು ಭಾವುಕಳು
ನಾನಾಗಲಾಸೆ
ಅವಳು ಬಯಸುವ ಸ್ವಪ್ನ
ನಾಚುತಲಿ  ನಗುನಗುತ
ಕನವರಿಸಿ ಕರಗಿ
ಮಿಡಿಯಲಿ ಮೌನವೀಣೆ
ಝೇಂಕರಿಸಿ ಖುಷಿಯಲ್ಲಿ
ಜಗವ ಮರೆತು..

ನನ್ನವಳು ಜಲಪಾತ
ನಾನಾಗಬೇಕು ಜಾರಿಸಾಗುವ
ನಡುವಿನ ಕಲ್ಲುಹಾಸಿನ ಧರೆಯು
ನನ್ನ ಅಪ್ಪುತಲಿ ಹೊಸಕುತಲಿ
ಬಳುಕುತಲಿ ಜಿಗಿಯಬೇಕು
ರೌಧ್ರ ರಭಸದಿ ನಲಿದು
ಗಮ್ಯ ಪ್ರೀತಿಯ ಸುರಿದು..

ನನ್ನವಳು ಹಣತೆ
ನಾನವಳ ಆವರಿಸಿದ ಪ್ರತಿಬಿಂಬದ
ಕಪ್ಪುಛಾಯೆ;
ನಾ ಕಪ್ಪಾದರೇನಂತೆ
ನೀನಲ್ಲವೇ ನನ್ನ ಜೀವದ
ಬಿಳಿಯ ಬೆಳಕಿನ ಗೆಳತಿ
ಬದುಕುವೆನು ನಾನು
ನೀನು ಉರಿಯುವವರೆಗೆ
ಹೆಚ್ಚಿಲ್ಲ ಆಸೆಯ ಗುರುತು
ನಿನ್ನ ಪ್ರೀತಿಯ  ಹೊರತು

ನನ್ನವಳು ಭೂಮಿ
ನಾನಲ್ಲವೇ ಅವಳಿಷ್ಟದ
ಏಕೈಕ ಪ್ರೇಮಿ ಪೂರ್ಣಚಂದ್ರ
ಅವಳಾಸೆಯಂತೆ ಸುತ್ತುತಲೇ ಇರುವೆನು
ಪ್ರತಿಕ್ಷಣವೂ ಎಡಬಿಡದೆ
ಇಟ್ಟಿರುವೆ ನನ್ನ ಜೀವ
ಅವಳ ಒಳಗೆ…
 -- ಮೌನ ವೀಣೆ
 ಚಿತ್ರ ಕೃಪೆ - ಅಂತರ್ಜಾಲ
 ನನ್ನವಳು --   ನನ್ನ ಹಾಡು ಪಂಜು ಮ್ಯಾಗಜಿನ್ನಲ್ಲಿ ಪ್ರಕಟವಾದದ್ದು ತುಂಬಾ ಖುಷಿ ತಂದಿದೆ.  ಧನ್ಯವಾದಗಳು ಪಂಜು.

Wednesday 20 February 2013

ಮತ್ತೆ ಮರುಗದಿರು..



ಚಿಂತೆ ಮಾಡುವುದೇಕೆ
ಇಲ್ಲದುದರ ಬಗ್ಗೆ
ಸಿಕ್ಕಿರುವುದರ ಬಗೆಗೆ
ಯೋಚಿಸಿಯೇ ಹೆಮ್ಮೆಪಡು
ಇದ್ದುದನು ಅನುಭವಿಸಿ
ಸುಖಿಯಗಿರು ಗೆಲುವಾಗಿರು..

ಬಯಸಿ ಮರುಗಿದರೆ
ಕೊರಗುವುದು ನಿನ್ನ ಜೀವ 

ನಿನಗಿರುವ ಸವಿಸಮಯ
ವ್ಯರ್ಥವಾಗುವುದು
ಹುಂಬ ಗೊಂದಲಗಳಲಿ.

ದಿನಗಳು ಉರುಳುವವು
ಸದ್ದಾಗದಂತೆ
ಸುಳಿವಿಲ್ಲದೆ ಸರಿದಿವೆ
ತಾ ಕಾರಣಗಳ ಮರೆತಂತೆ!!
ಇದ್ದು ಬಿಡು ಓ ಮನಸೇ..
ನಿನ್ನ ಪಾಡಿಗೆ ನೀನು
ನನ್ನ ಹೃದಯಕೆ ತಿಳಿಯದಂತೆ.
ಕಳಿಸದಿರು ಭಾವಗಳ
ಅದು ನೊಂದು ಅಳುವಂತೆ
.
              --ಮೌನ ವೀಣೆ

Monday 21 January 2013

ಮತ್ತೆ ಬಾರದೇ ..ಕಳೆದುಹೋದ ಆ ಸುಂದರ ಸಂಜೆಗಳು..


ಇಂದೇಕೋ ಎಲ್ಲ ಕಳೆದುಕೊಂಡ ಭಾವ. ಪ್ರಪಂಚದ ಎಲ್ಲ ಜಡತ್ವದ ಅಂಶಗಳು ನನ್ನನ್ನೇ ಮುತ್ತಿಕೊಂಡಂತೆ. ಮಲಗಿದ್ದಲ್ಲೇ ಮಲಗಿ ಆರೋಗ್ಯವಾಗಿದ್ದರೂ ಆಲಸ್ಯತನವಂಟಿ ಏನೋ ಅನಾರೋಗ್ಯದ ಛಾಯೆ. ಅದೇ ಯಾಂತ್ರಿಕ ಬದುಕು, ಅದೇ office (ಅದೇ ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡುವುದು) ಅದೇ ಕಂಪ್ಯೂಟರ್ ಪ್ರಪಂಚ. Google ಜೊತೆ ಒಂದಿಷ್ಟು ಹಗ್ಗಜಗ್ಗಾಟ, ಪ್ರತಿದಿನ ಬೆಳಗಾದರೆ ದಿನಚರಿ ಮುಗಿಸಿ ಆಫೀಸಿಗೆ ಓಡುವ ಧಾವಂತ. ಇನ್ನು ಸಂಜೆಯೋ ಅದೇ ಹಳೆ ವಿಷಯಗಳ ಚಿಂತನ-ಮಂಥನಗಳು ಆ client traffic drop ಆಯ್ತು  ಈ client rank ಇಲ್ಲ. ಮಾಡೋವಷ್ಟು work ಮಾಡಿದೀವಿ, actually we did good and more work for the traffic dropped why??? ಅದೇ ಒಂದಿಷ್ಟು ಚರ್ಚೆಗಳು, ಹಾಗೇ ನಾಲ್ಕಾರು colleague ಗೆಳತಿಯರಿಗೆ ಟಾಟಾ - bye ಹೇಳಿ ಇನ್ನಿಬ್ಬರು  ಗೆಳತಿಯರೊಂದಿಗೆ ಮನೆಯ ಕಡೆ ಪಯಣ. ಇರುವ ಮೂವರದ್ದೂ ಒಬ್ಬೊಬ್ಬರದ್ದು ಒಂದೊಂದು ಊರು. ಅದರಲ್ಲಿ ಅವರದೇ ಆದ ಒಂದಷ್ಟು ತಮ್ಮೂರ ಬಗೆಗಿನ ಒಣ  ಪ್ರತಿಷ್ಟೆಗಳು (ಇರಲೇ ಬೇಕು ಬಿಡಿ ಎಷ್ಟಂದ್ರೂ ಸ್ವರ್ಗಕ್ಕಿಂತಲೂ ಮಿಗಿಲಾದ ತಾಯ್ನೆಲ). ನನ್ನ ಮತ್ತು ಶೃಧ್ಹಾಳ ಸಣ್ಣ ಪುಟ್ಟ ವಾಗ್ವಾದಗಳು. ಆ ಮೊಂಡು ವಾದಗಳ ಇತ್ಯರ್ಥಕ್ಕೆ ಹಸೀನಾಳ ಮದ್ಯಸ್ಥಿಕೆಯ ಹಿತನುಡಿ. ಅವರಿಬ್ಬರ ವಾದಗಳಲ್ಲಿ ನನ್ನ ಅಂಬೋಣ(vote ups) . ಹೀಗೆ ಒಂದಷ್ಟು ಪ್ರೀತಿಯ ಜಗಳಗಳು, ಸಮಾಧಾನದ ನುಡಿಗಳು. conclusion ಏನು ಗೊತ್ತಾ?? ಯಾಕೋ lifu ಬೋರು. ಈ ದಿನಗಳೇ ಸರಿ ಇಲ್ಲ; ಹಾಗೆ ನಿರಾಶಾವಾದಿಗಳ ಹಾಗೆ ಜೀವನದ ಸುಖ-ದುಃಖಗಳ ಚಿಂತೆನೆಗಳು ಅದಕ್ಕೊಪ್ಪುವ ನಾಟಕೀಯ dialogueಗಳು. ಎಷ್ಟು ಚರ್ಚಿಸಿದರೂ ಅಷ್ಟೇ ಈ ಬದುಕಿನ ಗೋಳುಗಳು ಮುಗಿಯುವುದೇ ಇಲ್ಲವೆಂದು ಹೇಳಿ ಪಯಣ ಮರಳಿ ಗೂಡಿಗೆ. ದೇವರು ಈ ಜೀವಕ್ಕೆ ವರವಾಗಿಕೊಟ್ಟ ತುಂಬು ಪ್ರೀತಿ, ಕಾಳಜಿಯ ಮಹಾಪೂರ, ಹಾಲು ಜೇನಿನ ನನ್ನ family; ಅಪ್ಪ, ಅಮ್ಮ, ಒಬ್ಬಳೆ ತಂಗಿ, ಒಬ್ಬ ತಮ್ಮ ಅವುರುಗಳೊಂದಿಗೆ  ಒಂದೊಂದು ಮಾತು.

ತುಂಬಾ miss ಅನಿಸೋದು weekend ಇಳಿಸಂಜೆಗಳು. ಒಂದಷ್ಟು ಒಂಟಿತನ, ಕಟ್ಟಿದ ಕನಸುಗಳಿಗೆ ಬಣ್ಣ ತುಂಬುವುದು ಯಾವಾಗ ಎಂಬ ವಿಷಾದ, ದೇವರಿಗೆ ಕಿವಿಕೇಳುವುದೋ ಇಲ್ಲವೋ ಎಂಬ ಸಂಶಯ. ಇವುಗಳ ಮದ್ಯ ನೆನಪಾಗುವುದು ಬಾಲ್ಯದ ಸಂಜೆಗಳು. ಈ ಸಮಯ (ಡಿಸೆಂಬರ್ end ), ಶಾಲೆಯಲ್ಲಿ ಇರುವಾಗಲೇ ಚಿಂತೆ ಅಮ್ಮ ಗದ್ದೆಗೆ ಹುಲ್ಲು ಕೊಯ್ಯಲು ಹೋಗಿ ಬಿಟ್ಟಾಳೋ ಏನೋ ಎಂದು. ಏಕೆಂದರೆ ಅವಳೊಡನೆ ಹೋಗಿ ಗದ್ದೆಯಲ್ಲಿನ ಹಸಿಮಣ್ಣಿನಲ್ಲಿ  ಲಾಡು, ಚಕ್ಕಲಿ, ಕಡುಬು, ಕೊಡಬಳೆ ಮಾಡಿ ಒಣಹಾಕುವ  ಬಯಕೆ. ಗದ್ದೆಯ ಕೊನೆಯಲ್ಲಿ ಸಣ್ಣ ಹಳ್ಳ. ಏರಿಯ ಸುತ್ತ ದಟ್ಟವಾಗಿ ಬೆಳೆದ ಹೊಂಗೆಯ ಮರಗಳು. 4 - 5 ಓರಗೆಯ ಹುಡುಗ-ಹುಡುಗಿಯರ ಕೂಡಿ ಹೊಂಗೆ ಬಸ್ ಪ್ರಯಾಣದ ಆಟ. ಎಲೆಗಳೇ currency, ನೇರಳೆ ಎಲೆ 100 ರ ನೋಟು, ಹೊಂಗೆ ಎಲೆ 10 ರ  ನೋಟು, ನನ್ನ ತಮ್ಮನದು ಯಾವಾಗಲು ಕಂಡಕ್ಟರ ಕೆಲಸ, ದೊಡ್ಡಪ್ಪನ  ಮಗ ಯಾವಾಗಲು ಡ್ರೈವರ. ನಾನು,  ತಂಗಿ, ಪದ್ಮ ಎಲ್ಲ ಸಹ ಪ್ರಯಾಣಿಕರು. ಬಸ್ಸಿನಲ್ಲೊಂದಿಷ್ಟು ಆವಾಗಿನ ಹಿಟ್ ಸಿನಿಮಾದ ಹಾಡುಗಳು. ಸುಮ್ನೆ ರೇಡಿಯೋ ಆನ್ ಮಾಡುವುದು, ಹಾಡುವುದು ಮಾತ್ರ ನಾವೇ. ಹಿಂದಿ ಹಾಡುಗಳದ್ದಂತೂ ಸಾಹಿತ್ಯವೇ ತಿಳಿಯುತ್ತಿರಲಿಲ್ಲ. ಆದರೂ ಅದೇ tuneನಲ್ಲಿ ನಮ್ಮ lyrics ತುಂಬಾ ಮಜಾ ಕೊಡುತ್ತಿತ್ತು. ಡಿಮ್ ಧೀಂ ಟರರ್ರಾರರಾರ ಟರರಾರ. ಬುಲುಟರರಾರ..ಟೆವ್.ಟೆಟೆಟೆವ್...ಟೆಡೆಂವ್ ಟೆಡೆಡೆಡೆಂವ್ಡೆಂವ್, ಲಲಾಲಲಲ.. ಲಾಲಲಲ ......etc ಇವು ನಡುವಿನ ಮ್ಯೂಸಿಕ್ ಲೈನ್ ಗಳು. ಕತ್ತಲೆ ಆದದ್ದೇ ತಿಲಿಯುತ್ತಿರಲಿಲ್ಲ. ಕೆಲಸ ಮುಗಿಸಿ ಬಂದ ಅಪ್ಪ ಗದರಿದ ದ್ವನಿಯಲ್ಲಿ ಅಲುಗುತ್ತಿರುವ ನಮ್ಮ ಮರದ ಬಳಿ ಕೋಲುಹಿಡಿದು ಬಂದಾಗಲೇ ವಾಸ್ತವದ ನೆನಪು. ಆವಾಗ compulsory ಒಂದೆರಡು ಏಟುಗಳು. ಕೈಕಾಲು ತೊಳೆದು ಮನಸ್ಸಿಲ್ಲದೇ ಮುಖ ದುಮ್ಮಿಸಿಕೊಂಡು ಹೇಳುವ ಒಂದಷ್ಟು ಮಗ್ಗಿಗಳು ಶ್ಲೋಕಗಳು ಬಾಯಿಪಾಟಗಳು  etc.etc .. ಎಷ್ಟು ಚೆಂದಿತ್ತಪ್ಪಾ ಆ
ಸಂಜೆಗಳು, ಆ ಜೀವನ ..ಅನಿಸುವುದುಂಟು.

Wednesday 2 January 2013

ದಯವಿಟ್ಟು ಸಹಾಯ ಮಾಡಿ - ಪುಟ್ಟ ಜೀವ ಬದುಕಲಿ

'ನಾನು ಮತ್ತು ನನ್ನ ಕನಸು' ಇವೇ  ನನ್ನಯ ಬದುಕು ಎಂಬಂತೆ ಛಲದಲ್ಲಿ ಬದುಕುತ್ತಿರುವ ಜನ ನಮ್ಮ ಶಂಕ್ರಣ್ಣ ( ಶಂಕರ ಭಟ್ ). ಸಾರ್ಥಕ್ಯದ ಜೀವನ. ಪ್ರತಿಯೊಬ್ಬರ ಕನಸು - ತಾನು ಮತ್ತು ತನ್ನದೊಂದು ಕುಟುಂಬ, ತನ್ನ ಮಕ್ಕಳು, ಒಂದು ಪುಟ್ಟ ಮನೆ, ಬದುಕಿಗೊಂದಿಷ್ಟು ಸಣ್ಣ ಆದಾಯ , ಆ ಆದಾಯಕ್ಕನುಸಾರ ಖರ್ಚುಗಳು , ಒಂದಿಷ್ಟು ಆಸೆಗಳು, ಕೈಗೂಡಿಸಲು ಪ್ರಯತ್ನ ಅವುಗಳ ಜೊತೆ ಒಂದಿಷ್ಟು ಸಮಾಧಾನ ತೃಪ್ತಿಗಳು . ಆದರೆ ತಾನೊಂದು ಬಗೆದರೆ ದೈವ ಬೇರೊಂದೇ ಬಗೆಯುವುದು ಎಂಬಂತೆ "ಥಲಸ್ಸೆಮಿಯ ಮೇಜರ್" ಅನಾರೋಗ್ಯದ ಭೂತ ಅವನ ಪುಟ್ಟ ಕಂದಮ್ಮನ ಬೆನ್ನತ್ತ ಬೇಕಾ ? ಲಕ್ಷಕ್ಕೊಬ್ಬರಿಗೆ ಬರುವುದಂತೆ ಆ ಕಾಯಿಲೆ; ಆ ಪುಟ್ಟಮ್ಮನಿಗೇ ಬರಬೇಕಾ ? ಪಾಪ ಕಳೆದ ೩ ವರ್ಷಗಳಿಂದ ಅವಳ ಕಾಯಿಲೆಯ ಹತೋಟಿಗೆ ಅವರು ಪಟ್ಟ ಪಾಡು ಅವರಿಗೆ ಗೊತ್ತು ಮತ್ತು ದೇವರಿಗೆ ಗೊತ್ತು. ಅವಳಿಗೆ ತನಗಾದ ಕಾಯಿಲೆಯ ಹೆಸರ ಹೇಳಲೂ ಬಾರದ 5th ಕ್ಲಾಸಿನ ಪುಟ್ಟ ಪೋರಿಗೆ ಬಂದಿದೆ ಎಂಬುದು ವಿಷಾದನೀಯ. ಖಾಯಂ ಆಗಿ ಆಕೆಯ ಜೀವದಲ್ಲಿ ರಕ್ತ ಉತ್ಪತ್ತಿಯಾಗಲು ಉತ್ತಮ ಚಿಕಿತ್ಸೆಯ ಅವಶ್ಯಕತೆಯಿದೆ ಮತ್ತೆ ಅದಕ್ಕೆ ತಗಲುವ ವೆಚ್ಚವೂ ಬಹಳ ದೊಡ್ಡದು(೨೦ ಲಕ್ಷ).ಸಣ್ಣ ಬಡ ರೈತ ಎಷ್ಟರ ಮಟ್ಟಿಗೆ ಹೊಂದಿಸಲು ಸಾದ್ಯ ನೀವೇ ಹೇಳಿ? ದಯವಿಟ್ಟು ನಿಮ್ಮಗಳ ಹಣದ ಋಣ ಆ ಪುಟಾಣಿ ಮೈತ್ರಿಗಿರಲಿ. ನಿಮ್ಮನೆಯ ಹುಡುಗಿಗೆ ನೀವು ಸಹಾಯ ಮಾಡಲಾರಿರಾ? ಹೇಳಿರುವುದು ಸುಳ್ಳು ಮೋಸ ಎಂದೆನಿಸಿದರೆ ವಿಚಾರಿಸಿಯೇ ಮುಂದುವರೆಯಿರಿ. ದೇವರು ಒಳ್ಳೆಯದು ಮಾಡಲಿ. 




ಬಾಲಕಿಯ ಚಕಿತ್ಸೆಗೆ ನೆರವಾಗುವವರು ಸಂಪರ್ಕಿಸಿ -

ಶಂಕರ ಭಟ್
Ph. 8762759505
ವಿಜಯಾ ಬ್ಯಾಂಕ್ ಯಲ್ಲಾಪುರ SB A/C - 1226010011000314
ಕರ್ನಾಟಕ ಬ್ಯಾಂಕ್ SB A/C - 352250010021501

https://www.facebook.com/shankar.bhat.940


ಹೊಸ ವರುಷ
ಹೊಸ ಆಸೆ
ಹೊಸತನದ ಸ್ಪುರಣೆಯಲಿ
ಹೊಸ ಮೈತ್ರಿಯ
ಹೊಂಗನಸ ಕೈಗೂಡಿಸುವ ತೃಷೆಯಲ್ಲಿ
ನಿಮ್ಮ ಪ್ರೀತಿ ಹಾರೈಕೆ
ನಿಮ್ಮ ಋಣಗಳು ಜೊತೆಯಿರಲಿ
ಈ ಮೈತ್ರಿಯ ಬಾಳಿನಲಿ
ಬೆಳಗಲಿ ಉತ್ಸಾಹದಿ 
ಅವಳೆಲ್ಲ ನಾಳೆಗಳು ಎಂದು ಹಾರೈಸೋಣ...

                      -- ಮೌನ ವೀಣೆ