Total Pageviews

Sunday 3 March 2013

ನನ್ನವಳು


ನನ್ನವಳು ಹೂರಾಣಿ
ನಾನವಳ ಆರಾಧಕ
ಆಸ್ವಾದಿಸುತ ಆಘ್ರಾಣಿಸುತ
ಆಧರಿಸುತ ಸವಿಯಬೇಕು ಅವಳ
ಸೌಂದರ್ಯದ ಸಿರಿಯ
ಬಿಂಕ ಬೆಡಗಿನ ಒಯ್ಯಾರದ ಪರಿಯ
ಹೇಳುವಾಸೆಯು ನನಗೆ ಬೆರಗುಕಂಗಳಲಿ-
"ಕಂಡಿಲ್ಲ ಜಗದಲ್ಲಿ ನಿನಗಿಂತ ಸುಂದರಿಯ!!"

ನನ್ನವಳು ಭಾವುಕಳು
ನಾನಾಗಲಾಸೆ
ಅವಳು ಬಯಸುವ ಸ್ವಪ್ನ
ನಾಚುತಲಿ  ನಗುನಗುತ
ಕನವರಿಸಿ ಕರಗಿ
ಮಿಡಿಯಲಿ ಮೌನವೀಣೆ
ಝೇಂಕರಿಸಿ ಖುಷಿಯಲ್ಲಿ
ಜಗವ ಮರೆತು..

ನನ್ನವಳು ಜಲಪಾತ
ನಾನಾಗಬೇಕು ಜಾರಿಸಾಗುವ
ನಡುವಿನ ಕಲ್ಲುಹಾಸಿನ ಧರೆಯು
ನನ್ನ ಅಪ್ಪುತಲಿ ಹೊಸಕುತಲಿ
ಬಳುಕುತಲಿ ಜಿಗಿಯಬೇಕು
ರೌಧ್ರ ರಭಸದಿ ನಲಿದು
ಗಮ್ಯ ಪ್ರೀತಿಯ ಸುರಿದು..

ನನ್ನವಳು ಹಣತೆ
ನಾನವಳ ಆವರಿಸಿದ ಪ್ರತಿಬಿಂಬದ
ಕಪ್ಪುಛಾಯೆ;
ನಾ ಕಪ್ಪಾದರೇನಂತೆ
ನೀನಲ್ಲವೇ ನನ್ನ ಜೀವದ
ಬಿಳಿಯ ಬೆಳಕಿನ ಗೆಳತಿ
ಬದುಕುವೆನು ನಾನು
ನೀನು ಉರಿಯುವವರೆಗೆ
ಹೆಚ್ಚಿಲ್ಲ ಆಸೆಯ ಗುರುತು
ನಿನ್ನ ಪ್ರೀತಿಯ  ಹೊರತು

ನನ್ನವಳು ಭೂಮಿ
ನಾನಲ್ಲವೇ ಅವಳಿಷ್ಟದ
ಏಕೈಕ ಪ್ರೇಮಿ ಪೂರ್ಣಚಂದ್ರ
ಅವಳಾಸೆಯಂತೆ ಸುತ್ತುತಲೇ ಇರುವೆನು
ಪ್ರತಿಕ್ಷಣವೂ ಎಡಬಿಡದೆ
ಇಟ್ಟಿರುವೆ ನನ್ನ ಜೀವ
ಅವಳ ಒಳಗೆ…
 -- ಮೌನ ವೀಣೆ
 ಚಿತ್ರ ಕೃಪೆ - ಅಂತರ್ಜಾಲ
 ನನ್ನವಳು --   ನನ್ನ ಹಾಡು ಪಂಜು ಮ್ಯಾಗಜಿನ್ನಲ್ಲಿ ಪ್ರಕಟವಾದದ್ದು ತುಂಬಾ ಖುಷಿ ತಂದಿದೆ.  ಧನ್ಯವಾದಗಳು ಪಂಜು.

4 comments:

  1. ಹೆಚ್ಚಿಲ್ಲ ಆಸೆಯ ಗುರುತು
    ನಿನ್ನ ಪ್ರೀತಿಯ ಹೊರತು...ಈ ಸಾಲು ಹೆಚ್ಚು ಇಷ್ಟವಾಯಿತು...
    :::
    ವೀಣಾ -
    ಚಂದದ ಭಾವ ಲಹರಿ....
    ಸದಾ ಹೀಗೇ ಮಿಡಿಯುತಿರಲಿ ಮೌನವೀಣೆ...
    :::
    "ಪಂಜು" ಅಂತರ್ಜಾಲ ಪತ್ರಿಕೆಯಲಿ ಪ್ರಕಟವಾಗಿದ್ದಕ್ಕಾಗಿ ಶುಭಾಶಯಗಳು...

    ReplyDelete
  2. ನನ್ನವಳು ಭೂಮಿ
    ನಾನಲ್ಲವೇ ಅವಳಿಷ್ಟದ
    ಏಕೈಕ ಪ್ರೇಮಿ ಪೂರ್ಣಚಂದ್ರ.... ishtavaaytu :)

    Visit http://e-kavana.blogspot.in/ also

    ReplyDelete

Thanks