Total Pageviews

Wednesday, 2 January 2013

ದಯವಿಟ್ಟು ಸಹಾಯ ಮಾಡಿ - ಪುಟ್ಟ ಜೀವ ಬದುಕಲಿ

'ನಾನು ಮತ್ತು ನನ್ನ ಕನಸು' ಇವೇ  ನನ್ನಯ ಬದುಕು ಎಂಬಂತೆ ಛಲದಲ್ಲಿ ಬದುಕುತ್ತಿರುವ ಜನ ನಮ್ಮ ಶಂಕ್ರಣ್ಣ ( ಶಂಕರ ಭಟ್ ). ಸಾರ್ಥಕ್ಯದ ಜೀವನ. ಪ್ರತಿಯೊಬ್ಬರ ಕನಸು - ತಾನು ಮತ್ತು ತನ್ನದೊಂದು ಕುಟುಂಬ, ತನ್ನ ಮಕ್ಕಳು, ಒಂದು ಪುಟ್ಟ ಮನೆ, ಬದುಕಿಗೊಂದಿಷ್ಟು ಸಣ್ಣ ಆದಾಯ , ಆ ಆದಾಯಕ್ಕನುಸಾರ ಖರ್ಚುಗಳು , ಒಂದಿಷ್ಟು ಆಸೆಗಳು, ಕೈಗೂಡಿಸಲು ಪ್ರಯತ್ನ ಅವುಗಳ ಜೊತೆ ಒಂದಿಷ್ಟು ಸಮಾಧಾನ ತೃಪ್ತಿಗಳು . ಆದರೆ ತಾನೊಂದು ಬಗೆದರೆ ದೈವ ಬೇರೊಂದೇ ಬಗೆಯುವುದು ಎಂಬಂತೆ "ಥಲಸ್ಸೆಮಿಯ ಮೇಜರ್" ಅನಾರೋಗ್ಯದ ಭೂತ ಅವನ ಪುಟ್ಟ ಕಂದಮ್ಮನ ಬೆನ್ನತ್ತ ಬೇಕಾ ? ಲಕ್ಷಕ್ಕೊಬ್ಬರಿಗೆ ಬರುವುದಂತೆ ಆ ಕಾಯಿಲೆ; ಆ ಪುಟ್ಟಮ್ಮನಿಗೇ ಬರಬೇಕಾ ? ಪಾಪ ಕಳೆದ ೩ ವರ್ಷಗಳಿಂದ ಅವಳ ಕಾಯಿಲೆಯ ಹತೋಟಿಗೆ ಅವರು ಪಟ್ಟ ಪಾಡು ಅವರಿಗೆ ಗೊತ್ತು ಮತ್ತು ದೇವರಿಗೆ ಗೊತ್ತು. ಅವಳಿಗೆ ತನಗಾದ ಕಾಯಿಲೆಯ ಹೆಸರ ಹೇಳಲೂ ಬಾರದ 5th ಕ್ಲಾಸಿನ ಪುಟ್ಟ ಪೋರಿಗೆ ಬಂದಿದೆ ಎಂಬುದು ವಿಷಾದನೀಯ. ಖಾಯಂ ಆಗಿ ಆಕೆಯ ಜೀವದಲ್ಲಿ ರಕ್ತ ಉತ್ಪತ್ತಿಯಾಗಲು ಉತ್ತಮ ಚಿಕಿತ್ಸೆಯ ಅವಶ್ಯಕತೆಯಿದೆ ಮತ್ತೆ ಅದಕ್ಕೆ ತಗಲುವ ವೆಚ್ಚವೂ ಬಹಳ ದೊಡ್ಡದು(೨೦ ಲಕ್ಷ).ಸಣ್ಣ ಬಡ ರೈತ ಎಷ್ಟರ ಮಟ್ಟಿಗೆ ಹೊಂದಿಸಲು ಸಾದ್ಯ ನೀವೇ ಹೇಳಿ? ದಯವಿಟ್ಟು ನಿಮ್ಮಗಳ ಹಣದ ಋಣ ಆ ಪುಟಾಣಿ ಮೈತ್ರಿಗಿರಲಿ. ನಿಮ್ಮನೆಯ ಹುಡುಗಿಗೆ ನೀವು ಸಹಾಯ ಮಾಡಲಾರಿರಾ? ಹೇಳಿರುವುದು ಸುಳ್ಳು ಮೋಸ ಎಂದೆನಿಸಿದರೆ ವಿಚಾರಿಸಿಯೇ ಮುಂದುವರೆಯಿರಿ. ದೇವರು ಒಳ್ಳೆಯದು ಮಾಡಲಿ. 




ಬಾಲಕಿಯ ಚಕಿತ್ಸೆಗೆ ನೆರವಾಗುವವರು ಸಂಪರ್ಕಿಸಿ -

ಶಂಕರ ಭಟ್
Ph. 8762759505
ವಿಜಯಾ ಬ್ಯಾಂಕ್ ಯಲ್ಲಾಪುರ SB A/C - 1226010011000314
ಕರ್ನಾಟಕ ಬ್ಯಾಂಕ್ SB A/C - 352250010021501

https://www.facebook.com/shankar.bhat.940


ಹೊಸ ವರುಷ
ಹೊಸ ಆಸೆ
ಹೊಸತನದ ಸ್ಪುರಣೆಯಲಿ
ಹೊಸ ಮೈತ್ರಿಯ
ಹೊಂಗನಸ ಕೈಗೂಡಿಸುವ ತೃಷೆಯಲ್ಲಿ
ನಿಮ್ಮ ಪ್ರೀತಿ ಹಾರೈಕೆ
ನಿಮ್ಮ ಋಣಗಳು ಜೊತೆಯಿರಲಿ
ಈ ಮೈತ್ರಿಯ ಬಾಳಿನಲಿ
ಬೆಳಗಲಿ ಉತ್ಸಾಹದಿ 
ಅವಳೆಲ್ಲ ನಾಳೆಗಳು ಎಂದು ಹಾರೈಸೋಣ...

                      -- ಮೌನ ವೀಣೆ

Monday, 31 December 2012

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು







ಹೊಸ ವರ್ಷದ ಹೊಸದಿನ
ಹೊಸ ಆಸೆಗಳೆಲ್ಲ ಹೊಸೆದುಕೊಳ್ಳಲಿ
ಈ ದಿನದಿಂದ ನಿಮ್ಮಾಸೆಗಳೆಲ್ಲ
ಹುಸಿಯಾಗದೆ ಹಸಿರಾಗಲಿ
ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ ನನಸಾಗಲಿ
ಬದುಕು ಬಂಗಾರವಾಗಲಿ. 

ಹೊಸ ವರ್ಷದ ಶುಭಾಶಯಗಳು..
                 -- ಮೌನ ವೀಣೆ


Wednesday, 26 December 2012

ಅನಿಸುತಿದೆ..

ಇಬ್ಬನಿಯಲಿ ನಾ ತೊಯ್ದು 
ನನ್ನ ಹೃದಯ ಮೃದುವಾಯ್ತು 
ನಿನ್ನ ನೆನಪಿನ ಗರಿಕೆ 
ಕ್ಷಣದಲ್ಲೇ ಹಸಿರಾಯ್ತು 
ನನ್ನೊಡಲಿನ  ಪ್ರೀತಿ 
ಮೊಗ್ಗರಳಿ ಹೂವಾಯ್ತು 
ಇಂತಿರಲು ನಾ ಕಂಡದ್ದು 
ಕನಸೆಂದು ನೋವಾಯ್ತು..

ಬೆಳದಿಂಗಳ ರಾತ್ರಿಯಲಿ 
ನಗುಮೊಗದ ಸರದಾರ 
ಬಾನ  ಚಂದ್ರನು ತಾನು 
ರೋಹಿಣಿ ಬಳಗವ ಕೂಡಿ 
ಮಧುಚಂದ್ರಕೆ ಹೊರಟಂತೆ 
ನೀ ಜೊತೆಗೆ ಇರದಿರಲು 
ನನ್ನ ನೋಡಿ ನಕ್ಕಂತೆ 
ಮೌನ ಗೌರಿಯ ಹಾಗೆ 
ನಾನೊಂಟಿ  ವನದಲ್ಲಿ.

ಅಲೆವ ಮನದೊಳಗಿಂದು 
ಜಿಗಿವ ಆಸೆಯ ಕಂತೆ 
ಸೋತ ಕಂಗಳವಳಗೆ
ನೂರು ಮಾತಿರುವಂತೆ 
ನೀನು ಎಲ್ಲಿಹೆಯೆಂದು 
ಮನವ ಕಾಡಿದೆ ಚಿಂತೆ
ಜೀವ ನಿನ್ನಾಸರೆಯ  
ಕಾಯುತಿಹುದು .....
            -- ಮೌನ ವೀಣೆ

Thursday, 29 November 2012

ಕರೆದುಬಿಡು ಗೆಳತೀ


 
ಅನುಭಾವ ಅನುಭೂತಿ 
ಅಗಮ್ಯ ಪ್ರೀತಿಯಲಿ 
ಅನುಸರಿಸಿ ಸಂಗಾತಿ 
ನಡೆಯಲೂ ಜೊತೆಯಲ್ಲಿ 
ನಡುನಡುವೆ ನಗುತ 
ನೀನಾಡೋ ಮಾತಿನಲಿ 
ನಾ ಸ್ತಬ್ಧ ಗೆಳತೀ.!!
ನಿನ್ನ ಕುಡಿ ನೋಟದಲಿ ..

ಒಡನಾಟ ಭಾಂದವ್ಯ 
ಮಮಕಾರ ಎದೆತುಂಬಿ 
ನವಿರಾದ ಅನುರಾಗ 
ಅಭಿಮಾನ ಮನದುಂಬಿ 
ನನ್ನ ಕಳಕೊಂಡೆ ಗೆಳತೀ..!!
ನಿನ್ನ ಸಾಂಗತ್ಯದಲಿ 

ಹೆಸರಿಡು  ನನಗೊಂದು 
ನಿನ್ನೆದೆಯ ಗೂಡಿನಲ್ಲಿ 
ಕರೆದುಬಿಡು ನನ್ನನ್ನು 
ಕಣ್ರೆಪ್ಪೆ ಸದ್ದಿನಲ್ಲಿ 
ಮರೆತುಬಿಡುವೆನು ಗೆಳತೀ...
 ಈ ಜಗವ ಆ ಕ್ಷಣದಿ...

---- ಮೌನವೀಣೆ 

ಚಿತ್ರಕೃಪೆ : ಅಂತರ್ಜಾಲ

Tuesday, 9 October 2012

ಅರಿಯದ ಭಾವಗಳು!!

 

ಎತ್ತ ಹೋಗಿದೆ ಏನು ಆಗಿದೆ 
ಒಂದೂ  ತಿಳಿಯದ ಜೀವನ 
ದಿಕ್ಕು ಕಾಣದೆ ಕಣ್ಮುಚ್ಚಿ ಸಾಗಿದೆ 
ನೀನು ಇಲ್ಲದ ಕಾರಣ.

ತಿಳಿಯದಾಗಿದೆ 
ನೆಪಗಳು ಕಾಡಿವೆ 
ಒಂಟಿ ಬದುಕಲಿ ಮೌನವು
ಹೇಳುವಾಸೆಯು ಹೆಸರೇ ತಿಳಿಯದು 
ಬಗೆಯೇ ಅರಿಯದ ಭಾವವು??!

ಮೂಕ ವಿಸ್ಮಿತ ಒಮ್ಮೆ ಭಾವುಕ
ಏನು ವಿಸ್ಮಯ ಜಗವಿದು 
ಎಲ್ಲ ಮರೆತಿದೆ ಬದುಕೇ ಕಲಿಸಿದೆ
ಏನೂ ಅರಿಯದೆ ನಗುವುದು.

Sunday, 16 September 2012

ಇದು ನಮ್ಮ ಜೀವನ..



 ಒಮ್ಮೆ ಹರುಷ ಒಮ್ಮೆ ದುಃಖ
ನಲಿವುದೊಮ್ಮೆ ಅಳುವುದೊಮ್ಮೆ 
ಕನಸುಕಂಡು ಕುಣಿಯೋದೊಮ್ಮೆ
ಇದು ನಮ್ಮ ಜೀವನ..

ಮಳೆಯು ಒಮ್ಮೆ ಬಿಸಿಲು ಒಮ್ಮೆ 
ಇಂತಿರುವುದು ಶ್ರಾವಣ
ಒಮ್ಮೆ ಏಳು ಒಮ್ಮೆ ಬೀಳು
ಬದುಕೇ ಒಂದು ದಾರುಣ.

ಬಿಡದ ಮೋಹ ಪಡೆವ ದಾಹ
ಹಟದಿ ನಡೆದ ಮಾನವ
ಪಡೆವ ಛಲದಿ ಸಿಗುವ ಭರದಿ 
ಆಗಬೇಕೆ ದಾನವ!!??

ಸತ್ತ ಜೀವ ಬದುಕಲೆಂದು 
ದೇವ ನಿನಗೆ ಲಂಚ ಕೊಡುವೆ
ಆಸೆ ಜೀವ ಬದುಕಿ ಬಿಡಲಿ 
ನಿನ್ನ ಕರುಣೆ ಬೇಡುವೆ..



Wednesday, 8 August 2012

ನನ್ನ ಅಮ್ಮನೇ..



ಅಮ್ಮ ನಿನ್ನ ಕನಸನೊಂದ 
ನನಸು ಮಾಡೋ
ಆಸೆ ನನಗೆ
ಬೆಟ್ಟದಷ್ಟು ಪ್ರೀತಿ ಕೊಟ್ಟು
ಎತ್ತಿ ನಗಿಸಿ 
ತುತ್ತು ಕೊಟ್ಟೆ
ಅಳುವ ಮೊಗಕೆ ಮುತ್ತು ಕೊಟ್ಟು
ಬೆಳೆಸಿ ಜೀವ ಮಮತೆ ಇಟ್ಟೆ.

ನಿನ್ನ ಬದುಕ ಬತ್ತಿ ಮಾಡಿ
ನನ್ನ ಬದುಕು ಬೆಳಗಲೆಂದು
ಕಷ್ಟ ಕೋಟಿ
ಛಲದಿ ತಡೆದೆ 
ನನ್ನ ದೈವವೇ ..

ನಿನ್ನ ಆಸೆ ಮರೆತು ಹಾಡಿ
ಕನಸು ಗುರಿಯ 
ಹಸನು ಮಾಡಲೆಂದು
ದುಡಿದೆ ಮನಸು ಮಾಡಿ
ನನ್ನ ಅಮ್ಮನೇ..