Total Pageviews

Showing posts with label kannada blog. Show all posts
Showing posts with label kannada blog. Show all posts

Tuesday, 9 March 2021

ಮನಸ್ಸಿಗೊಂದು ರಿಲೇಕ್ಸ್ ಮಾತು

ಮನಸ್ಸಿಗೆ ಬೇಜಾರಾದಾಗ ಈ ಜೀವನವೇ ಸಾಕು ಎನ್ನಿಸಿಬಿಡುತ್ತದೆ.ಆದರೆ ನಮ್ಮ ಜವಾಬ್ದಾರಿಗಳನ್ನು ನೆನೆಪಿಸಿಕೊಂಡರೆ ಜೀವನ ಹಿಂಗೇ ಅಂತ ಅನಿಸುವುದೂ ಇದೆ. ನಮಗೆ ಎಲ್ಲರಿಗೂ ನಮ್ಮದೇ ಆದ ಕನಸಿನ ಲೋಕದಲ್ಲಿ ಬದುಕಬೇಕನಿಸುವುದು ನಿಜ ಆದರೆ ನೈಜ ಜೀವನ ಬರೀ ಕಲ್ಪನೆ, ಭ್ರಮೆಯಲ್ಲ. ವಾಸ್ತವದಲ್ಲಿ ನಾನು ನನ್ನದು ಎಂದು ಎಷ್ಟೇ ಹಾರಾಡಿದರೂ ಭಗವಂತ ಹಣೆಯಲ್ಲಿ ಅವರವರ ಪಾಲಿಗೆ ದಕ್ಕುವುದು ಇಷ್ಟು ಎಂದು ಬರೆದಿರುತ್ತಾನಂತೆ. ನಾವು ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದೇವೆ ಎಂಬ ನಂಬಿಕೆ ನಮ್ಮಲ್ಲಿದ್ದರೆ ಇತರರ ಮಾತಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ. ಎಲ್ಲವನ್ನೂ ಸಹಿಸುವ ಗುಣವಿದ್ದವರಲ್ಲಿ ಸಮಸ್ಯೆ ಮೆಟ್ಟಿ ನಿಟ್ಟುವ ಸ್ಟೈರ್ಯವಿರುತ್ತದೆ. ನಮಗೆ ಅವಶ್ಯವಿರುವಾಗ ಪಡೆದದ್ದು ಚಿಕ್ಕದಾದರೂ ಅಮೂಲ್ಯವಾಗಿರುತ್ತದೆ. ಕೊಟ್ಟವರನ್ನು ಮರೆಯಬಾರದು.

ಹೆದರಿ ನಿಂತರೆ ನಿಂತೇ ಇರುತ್ತೇವೆ ನಿಲ್ದಾಣದಂತೆ; ಮುನ್ನಡೆದರೆ ಆ ಪ್ರಯಾಣವೇ ಉಜ್ವಲ ಜೀವನ. ಮನುಷ್ಯ ತನ್ನ ಗುಣ ನಡತೆಯಿಂದ ದೊಡ್ಡವನಾಗಬಲ್ಲ ಹೊರತು ಆಸ್ತಿ ಹಣ ಅಂತಸ್ತಿನಿಂದಲ್ಲ ಎಂಬುದು ಮನದಲ್ಲಿರಲಿ, ನಮ್ಮ ಗುರಿ ಮುಟ್ಟುವುದಕ್ಕೆ ಉಪಯೋಗವಾಗುವ ಪ್ರತಿಕೆಲಸ ತ್ರಿಕರಣ ಶುದ್ಧಿಯಿಂದ ಮಾಡಬೇಕು. 

ಇತ್ತೀಚಿಗೆ ಓದಿದ ಸಾಲುಗಳಲ್ಲಿ ತುಂಬಾ ಹಿಡಿಸಿದ ಹಾಗೂ ತುಂಬಾ ಸಮಾಧಾನ ಕೊಟ್ಟ ಸಾಲುಗಳು -

ಕಾಣುವ ಕನಸಿಗೂ ಮೂಡುವ ಕಲ್ಪನೆಗೂ 
ಮುಂದಿನ ದಾರಿಯಾಗಲಿ ಪ್ರಶಾಂತ 
ಕಾಣದ ಬದುಕಿಗೂ ಮುಂದಿರುವ ವಾಸ್ತವಕೂ 
ಸಿದ್ಧವಿರಲಿ ಮನವೆಂದಿಗೂ ಶಾಂತ
ಮಧುರ ಭಾವನೆಯ ಸುಳಿಯ ಸಿಲುಕದೇ 
ಸಾಗುತಿರಲಿ ಪಯಣ ಪ್ರಶಾಂತ 
ತಲ್ಲಣಿಸದೇ ಮನವಿರಲಿ ಎಂದಿಗೂ 
ಬಿಳಿಹಾಲ ನೊರೆಯಂತೆ ಶಾಂತ. 

ಭಾವನೆಗಳ ಗೂಡಲ್ಲಿ 
ಬಗೆದಷ್ಟು ಹಾಡು
ಈ ಪ್ರೀತಿ ಒಲವೆಲ್ಲ 
ಮೊಗೆದಷ್ಟು ನೋಡು.

Tuesday, 7 November 2017

ಅನಿಸುತಿದೆ ಹೀಗೆ


Image result for lonely girl

ಅಚ್ಚರಿ ಅನಿಸುತಿದೆ 
ಬದಲಾಗುತಿದೆ ಬದುಕು 
ದಿನಗಳು ಜಾರುತಿವೆ 
ಹಿಡಿತವಿಲ್ಲದೆ ಸರಿದಿದೆ ದಿಗಂತದೆಡೆಗೆ!!?

ಯೋಚನೆಗಳು ಯೋಜನೆಗಳು ನೂರಾರು 

ಕ್ಷಣಕ್ಕೊಂದು ದಿನಕ್ಕೊಂದು 
ತಿರುವುಗಳ ಹೊಯ್ದಾಟದಲಿ 
ನಲುಗಿ ಹೋಗಿವೆ. 

ಭಾವನೆಗಳಿಗೆ ಬರವಿಲ್ಲ 

ಭ್ರಮೆಗಳಿಗೆ ಕೊನೆಯಿಲ್ಲ 
ಹುರುಳಿಲ್ಲದ ಕಾಯಕದಲ್ಲಿ 
ಕಳೆದಿದೆ ದಿನವೆಲ್ಲ 
ಫಲಿತಾಂಶ ಸೊನ್ನೆಯಲಿ 
ಕೈಚೆಲ್ಲಿ ಕುಳಿತಿದೆ ಸೋತು. 

                 -ಮೌನವೀಣೆ

Wednesday, 30 October 2013

ಬೇಸರ




ಏಕೋ ಏನೋ ಮನಕೆ 
ಇಂದು ಗಾಯವಾಗಿದೆ 
ತೆರೆದು ನೋಡಲು 
ನನ್ನ ಹೃದಯ ಮಾಯವಾಗಿದೆ

ನಿನ್ನ ಪ್ರೀತಿ ಪಡೆದ ಜೀವ 
ಮುನಿಸ ತೋರಿದೆ 
ನಿನ್ನ ಸನಿಹ ಬೇಕು ಎಂದು 
ನನ್ನ ಕಾಡಿದೆ 

ಎಂದು ಬರುವೆ ಏನ ತರುವೆ 
ನನಗೆ ಹೇಳದೆ 
ಅಪ್ಪಿ ಬಿಟ್ಟು ಪಪ್ಪಿ ಕೊಡುವೆ       
ಮಾತೇ ಆಡದೆ
     
       -- ಮೌನವೀಣೆ

Thursday, 19 September 2013

ನನಗೆ ಪ್ರೀತಿಯಾಗಿದೆ!!!


ಮನಕೆ ಕಚಗುಳಿಯಾಗಿದೆ 
ಪ್ರಾಣಪಕ್ಷಿಯು ಕೂಗಿದೆ
ಒಲವ ಕನಸದು ಕಾದಿದೆ 
ಹೃದಯ ಪಲ್ಲವಿ ಹಾಡಿದೆ 
ಅಪರೂಪದ ಸಂಭ್ರಮ ತುಂಬಿದೆ 
ಸ್ವಾರ್ಥ ಗೋಪುರ ಕಳಚಿದೆ
ಮೌನ ಮಾತುಗಳಾಡಿದೆ 
ಗಗನ ಭೂಮಿಗೆ ಜಾರಿದೆ 
ಏನು ಕಾರಣ ಕೇಳಿದೆ?? 
ನಾಚಿ ಹೇಳಿದೆ ನಾನು..
ಅಂತೂ ಇಂತೂ ನನಗೆ 
ಪ್ರೀತಿಯಾಗಿದೆ!!

     --ಮೌನವೀಣೆ

Wednesday, 21 August 2013

ಇನಿದನಿ




ಇಂಪಾದ ಗಾನ ಕೇಳಿದಾಗೆಲ್ಲ
ಇನಿಯಾ ನಿನ್ನ 
ಇನಿದನಿಯ ಪಿಸುಮಾತು 
ಇಂಚಿಂಚಾಗಿ
ಇಳಿದು ಮನದೊಳಗೆ 
ಇಬ್ಬನಿಯ ಶುಷ್ಕದಲಿ
ಇಷ್ಟಿಷ್ಟೇ ತೋಯ್ದು ತೇವವಾದಂತೆ 
ಇಮ್ಮಡಿಸಿದವು ಆಸೆಗಳ
ಇಂಚರವಾಗಿ. . 


ಕಲ್ಪನೆಗಳ ಕವನಗಳು 
ಕನವರಿಕೆಯ ಕನಸುಗಳು 
ಕವಲೊಡೆದು ಕಾಡಿ 
ಕಟ್ಟಿಬಿಟ್ಟವು ಕಾಮನಬಿಲ್ಲ 
ಕನ್ನಡಿಯ ಅಂಚಲ್ಲಿ 
ಕಣ್ ಕೊರೈಸುವಂತೆ 
ಕದಡಿ ಹಲವು ಬಣ್ಣವಾಗಿ..  


ನೀ ಕೇಳಿದ ಒಗಟು
ನಿನ್ನಾಪ್ತತೆಯ ಭಾವುಕತೆ
ನೀಕೊಟ್ಟ ಮಾತು  
ನೀ ಬೆಸೆದ ಬಾಳ ಭಾಂದವ್ಯ
ನಿಸ್ವಾರ್ಥ ತುಂಬಿದ ಪ್ರೇಮ
ನಿನ್ನಾಗಿಸಿದೆ ನನ್ನ
ನಿಸ್ಸಂಶಯವಾಗಿ..

Thursday, 25 July 2013

ಮನಸು ತುಂಬಿದೆ



ಮನತುಂಬ ಸವಿಗನಸು
ಎದೆತುಂಬ ಭಾವೋನ್ಮಾದ
ಹೊಸದೆನಿಸಿದೆ ಈ ಜಗವು
ಬಣ್ಣವಾಗುತಿದೆ ಬದುಕು
ಸೊಗಸೆನಿತಿಸುದೆ ಈ ಭೂಮಿ
ಆಪ್ತವೆನಿಸಿವೆ ಸಂಬಂಧಗಳು
ಅನಿಸುತಿದೆ ಬದಲಾವಣೆ
ನನ್ನ ತುಂಬಾ......

ಜೊತೆಗಾರನ ಬಾಂಧವ್ಯ
ಅಭಿಮಾನದಕ್ಕರೆಗಳು
ವಾತ್ಸಲ್ಯದಾಳದ ಮಮತೆ
ಕಣ್ಣು ತುಂಬುವ ಪ್ರೇಮ
ಒಟ್ಟಾಗಿ ಕಟ್ಟಿಕೊಟ್ಟಿವೆ
ನೂರ್ಮಡಿಸುವ 

ಗಗನ ಚುಂಬಿಸುವ
ಚೈತನ್ಯ ನನ್ನ ತುಂಬಾ......

ಸತ್ಯ-ಮಿಥ್ಯಗಳ
ಹಿರಿಮೆ-ಅರಿವಿನ ಗೋಜು
ಜಗದಳಲ ಗೊಂದಲಗಳು
ಬೇಡವೆಂದಿದೆ ಅಂತರ್ಯ
ಮರೆತಿರುವೆನೇ ನಾನು
ಜಗದ ಪರಿವ??!!
ಒಲವ ಕಾರ್ಮೋಡ ಕವಿದಿದೆ
ಈಗ ನನ್ನ ತುಂಬಾ......

ಹೃದಯದಲಿ ಪ್ರೀತಿ ಗುಪ್ತಗಾಮಿನಿಯಂತೆ
ಕನವರಿಸುತಲಿ ಹರಿಯುತಿದೆ.
ಬಾನ ಚಂದ್ರನ ಬೇಟಿಗೆ
ಮುಸ್ಸಂಜೆಯಲಿ ಕಡಲು ಹದವಾಗಿ ನಲಿದಂತೆ
ತಲ್ಲಣಿಸಿ ಕಾತರಿಸಿ..
ಅವನು ಬರುವಾ ಹೊತ್ತು
ಹೆಸರಿಲ್ಲದ ಪುಳಕಗಳು
ನನ್ನ ತುಂಬಾ......

Wednesday, 3 July 2013

ಮೊದಲ ಮಾಸ

















ಮಧುರ ಮೈತ್ರಿಯ 
ಸವಿಮಧುವಿನ ಸಿಹಿಯ ಮೆಲ್ಲುತ್ತ 
ಮೆಲ್ಲನೆ ಜಾರಿದೆ ಮೊದಲ ಮಾಸ 
ಒಲವ ಮಾಧುರ್ಯದ ಕ್ಷಣಗಳು 
ಮನದ ಆಳದಿ ಮೌನ ಕೇಳಿದೆ 
ಕಳೆದುಹೋಯಿತೆ! 
ಮದುವೆಯಾಗಿ ತಿಂಗಳು!!?
ದಿನ ಕಳೆದಿದೆ ಕ್ಷಣದಂತೆ 
ಬಾಳ ನಂಟುಗಳೆಲ್ಲ ಗಂಟಾಗಿ 
ಒಟ್ಟಾಗಿ ಸುತ್ತಿದೆ 
ಅನುರಾಗ -ಅಭಿಮಾನ ಮಮತೆಯ 
ಕಡಲಿನ ಕಟ್ಟೆ ತನ್ನೊಳಗೆ ಒಡೆದಿದೆ
ಭಾವಗಳು ಪರವಶವಾಗಿ 
ಬಣ್ಣದೊಕುಳಿಯಾಗಿವೆ 
ಬದುಕಿನ ಪೂರ್ಣತೆಯ 
ಸಾರ್ಥಕ್ಯದೆಡೆಗೆ 
ಹಜ್ಜೆಗೆ ಗೆಜ್ಜೆ 
ಘಲ್ಲೆನ್ನುತ ಸಾಗಿದೆ 
ಪ್ರೀತಿ ರಾಘವನ ಒಲವಿನ 
ಕೊಳಲ ಹಾಡಿಗೆ ಮೌನವೀಣೆ
ಹಿತವಾಗಿ ನವಿರಾಗಿ ಮೀಟಿದೆ 

           -- ಮೌನವೀಣೆ



Thursday, 23 May 2013

ಸಾರ್ಥಕ ಬದುಕು



ನೀರಲ್ಲಿ ಅರಳಿದ
ಬಿಳಿಕಮಲದ ಮೊಗ್ಗೊಂದು
ನೂರ್ಮಡಿಸುವ ಆಸೆಯ
ಹೊತ್ತು ಅರಳುತಿದೆ ಬಿರಿದು
ಪಕಳೆಯಲಿ ನಸುಗೆಂಪು
ತನ್ನೊಳಗೆ ಹೊಸಕಂಪು
ತಂಗಾಳಿಯ ಹಿತಸ್ಪರ್ಷಕೆ
ನಗುನಗುತ ತಲೆದೂಗಿ
ಹೇಳಿದೆ ಭಾಸ್ಕರಗೆ ಶುಭೋದಯ..

ಬುಡದಲ್ಲಿ ಕರಿಗೆಸರು
ಸುತ್ತೆಲ್ಲ ಬಳ್ಳಿಗಳ ಅಡರು
ನಡುವಲ್ಲಿ ಪುಟ್ಟ
ಜೀವಿಗಳ ಸಂತಾನ
ಪರೋಪಕಾರಿಯು ಅಹುದು
ಹೂಗಳ ಅರಸಿ.

ಅಲೆಗಳ ಕುಲುಕಾಟ
ದೋಣಿಗಳ ತಿರುಗಾಟ
ಕೀಟಗಳದ್ದಂತೂ ಎಲೆ ಹೂವ
ಕೊರೆಯುತ ಆಹಾರದ ಹುಡುಕಾಟ
ಕ್ಷಮೆಯಾ ಧರಿತ್ರಿಯ ಮಗಳೇ
ನೀ ಸೌಖ್ಯಕಾರಿಣಿ.!

ಸೌಂದರ್ಯದ ರಾಶಿ ನೀ;
ರೂಪದಲಿ ರಾಣಿ .
ಸುರ-ದೇವತೆಗಳ ಆಸನವು
ನೀ ಚಂದ್ರಮುಖಿ
ಕ್ಷಣಿಕ ಬದುಕಲೂ ಪಡೆವೆ
ಸಾರ್ಥಕ್ಯದ ಪರಿಪೂರ್ಣತೆಯ
ಓ ಕಮಲವೇ ನೀ ನಿಜಕ್ಕೂ ಸೌಭಾಗ್ಯವತಿ.


                                 --- ಮೌನ ವೀಣೆ
ಚಿತ್ರ ಕೃಪೆ - ಅಂತರ್ಜಾಲ

Monday, 22 April 2013

ಬೆಳ್ಳಿ ಕಾಲೆಜ್ಜೆಗಳು




ಬೆಳ್ಳಿ ಹಿಮದೆದೆಯಲ್ಲಿ
ಬೆಚ್ಚಗಿನ ಪಾದವು ಸೋಕಲು
ಅಚ್ಚಾಯಿತು ಹೆಜ್ಜೆಯ ಗುರುತು
ಮೆಚ್ಚುಗೆಯ ಒಪ್ಪಿಗೆಯಂತೆ.

ಕುಡುಗುಡುವ ಚಳಿಗಾಳಿಯಲಿ
ಹೆಪ್ಪುಗಟ್ಟಿದ ಹಿಮಗಡ್ಡೆಗಳು
ಸಕ್ಕರೆಯ ಮಳೆಯಂತೆ
ಮುತ್ತಂತೆ ಬುವಿಗಿಳಿಯಲು
ಸ್ವರ್ಗ ಅನಿಸಿತು ಧರೆಯು
ದಂಗಾದೆ ಕ್ಷಣದಲ್ಲಿ!!

ಎನಿತು ಸೊಭಗಿನ ಧರಣಿ
ಎಲ್ಲಿ ನೋಡಿದರಲ್ಲಿ ತುಂಬಿ-
ತುಳುಕಿದಂತಿದೆ ಬಿಳಿಮಣಿ
ಮುಂದೆ ಸಾಗವ ಮನಸಲಿ 
ಇನ್ನಷ್ಟು ಮತ್ತಷ್ಟು...
ಬೆರಗುಗಳ ತುಡಿತಗಳು!!?

ಇನ್ನಷ್ಟು ಮುನ್ನಡೆವೆ
ಕಣ್ತುಂಬಿ ಮನತುಂಬಿ
ಸಂತಸದಿ ಕುಣಿದು
ಭೂರಮೆಗೆ ಮಣಿದು
ಆನಂದದಿ ನಾ ಹೇಳ್ವೆ
ನಾ ಮುಂದೆ ಬರುವೆ; ನನ್ನೊಳಗೆ ನಲಿವೆ
ಈ ಜಗವ ಮರೆವೆ..
ಇನ್ನೂ ಅನಿಸುತಿದೆ..

             --  ಮೌನ ವೀಣೆ
...............

ಮಯೂರ ಚಿತ್ರ ಕವನ ಸ್ಪರ್ಧೆಗಾಗಿ ಬರೆದದ್ದು, ಈ ತಿಂಗಳ ಮಯೂರ ಪತ್ರಿಕೆ ಪರೀಕ್ಷಿಸಲಿಲ್ಲ. ಪ್ರಶಸ್ತಿ ಗೆದ್ದಿಲ್ಲ ಅನಿಸತ್ತೆ. ಬಹುಮಾನ ಗೆದ್ದರೆ ಕಳಿಸುತ್ತಿದ್ದರು ಅಲ್ಲವೇ ? :-) ಆದರೆ ನನ್ನ ಬ್ಲಾಗಿನ ಬಂಧುಗಳಿಗಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸಿದ್ದೇನೆ. ಇದು ನಮ್ಮ ಪ್ರಕಾಶಣ್ಣನವರ ಚಿತ್ರ. ಅವರ ಅದ್ಭುತ ಚಿತ್ರ ಹವ್ಯಾಸಕ್ಕೆ ನನ್ನಕಡೆಯಿಂದ ಜೈ ಹೋ ಧನ್ಯವಾದ

Monday, 1 April 2013

ಕನಸಿನ ಮೌನಕ್ಕೊಂದು ಮಾತು ಬಂದಾಗ..











ಮಾತು ಬರದ ಮೌನಕ್ಕೆ ಕನಸಾದ ಬಗೆಯ ಒಂದು ಚಿಕ್ಕ ಕನಸಿನ ಕತೆ. ಹುಚ್ಚುಕೋಡಿಯ ತಲೆಯೊಳಗೆ ಚಿಕ್ಕದೊಂದು ಆಸೆಯ ಭಾವ, ಬಯಸುವ ಮನಸ್ಸಲ್ಲಿ, ನೆನೆಯುತ ಮಲಗಿದಲ್ಲಿ ಬೀಳುವುದು; sometime ಕಾಣೋದು ಅದೇ ಕನಸು, ಭ್ರಮಿಸಿಕೊಳ್ಳೋದು ಅದೇ ಅಂದರೂ ತಪ್ಪಾಗದು. ನಾವು ಎಂತಹ ಮರೆಗುಳಿ ವಂಶದವರೆಂದರೆ ಒಮ್ಮೊಮ್ಮೆ ಒಂದು ವಿಚಾರದ ಬಗ್ಗೆ ಚಿಂತಿಸಿ ನಿರ್ಧಾರ ತೆಗೆದುಕೊಳ್ಳಲು ಹಾಗೆ ಕಣ್ಮುಚ್ಚಿ  ಕುಳಿತು ಧ್ಯಾನಸ್ಥ ಸ್ಥಿತಿ ತಲುಪಿ ಆದರೆ-ಹೋದರೆ ಎಂಬ ಆಗು-ಹೋಗುಗಳ ಹತ್ತು ವಿಚಾರಗಳಲ್ಲಿ ಮುಳುಗಿ ನೈಜ ವಾಸ್ತವದ ವಿಚಾರ ಮರೆತು ಹೊಸದಾಗಿ ಬಂದ ಯೋಚನೆಗಳಿಗೊಂದು ಅಂತ್ಯ ಹಾಡಲು ಉದ್ಯುಕ್ತರಾಗಿ ಬಿಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ದಾಸರ ಒಂದು ಹಾಡು ನೆನಪಿಗೆ ಬರುತ್ತದೆ - ಈ ಮಾನವರು ಹೇಳುವುದು ಒಂದು ಮಾಡುವುದು ಇನ್ನೊಂದು ನಂಬೋದು ಹೇಗೆ ಕಾಣೆ ಪದ್ಮಾವತಿ ಪತಿ ತಿರುಪತಿ ಶ್ರೀವೆಂಕಟಚಲಪತಿ.. ಅಂತ.

ಒಮ್ಮೊಮ್ಮೆ ನನ್ನೊಳಗಿನ ಕಿಚ್ಚು ಹುಚ್ಚು ಅನಿಸಿಬಿಡುತ್ತದೆ. ಮನದೊಳಗೆ ಮೂಡಿದ ಭಾವನೆಗಳೂ ಭಾರ ಎನಿಸಿಬಿಡುತ್ತದೆ. ಮಾತಾಡುವ ವಾಚಾಳಿಯ ನಾಲಿಗೆ ಕೂಡ ಹೊರಳಲು ನರಳುತ್ತದೆ ಒಮ್ಮೊಮ್ಮೆ ತಾನಾಗಿ ಶಕ್ತಿ ತುಂಬಲು ಬಂದ ಉಸಿರನೂ ಕೂಡ ಹೊರದಬ್ಬಲು ಕಷ್ಟವೆನಿಸಿಬಿಡುತ್ತದೆ. ಅತ್ತು ಬಿಟ್ಟು  ಈ ತನುವಿನ ಕಷ್ಟ ಕಳೆಯೋಣವೆಂದರೆ ಹಾಳಾದ ಕಣ್ಣಿರು ಕೂಡ strike  ಮಾಡಿಬಿಡುತ್ತದೆ.  ಒಮ್ಮೊಮ್ಮೆ ನಮ್ಮೊಳಗಿನ ನಾನೆಂಬ ಸ್ವಾರ್ಥದ ಸ್ವಾಭಿಮಾನ ಹೆಮ್ಮೆ ಎನಿಸುತ್ತದೆ. ಒಮ್ಮೊಮ್ಮೆ ಸಂಗಾತಿ ಜೊತೆಗಾರನಿಲ್ಲವೆಂದು ಮರುಗುವ ಮನಸ್ಸು ಸುತ್ತಣ ಸಂಸಾರದ ಸಂಘರ್ಷಗಳ ನೋಡಿ single life has great comfort ಎಂದು ಎದೆಯುಬ್ಬಿಸಿ ತನ್ನೊಳಗೆ ಬೀಗಿಬಿಡುತ್ತದೆ. ಒಮ್ಮೊಮ್ಮೆ ಸತ್ಯ ಒಪ್ಪಿಕೊಳ್ಳಲು ಮನಸಾಲಾಗದೆ ಮಿಥ್ಯವೆಂದು ಸಾಧಿಸಿಬಿಡೋಣ ಎಂದೂ ಅನಿಸುವುದುಂಟು. ಒಮ್ಮೊಮ್ಮೆ ತೀರಾ ಚಿಕ್ಕ -ಪುಟ್ಟ ಗೆಲುವಿಗೂ ನಲಿಯುವ ಮನಸ್ಸು ದೊಡ್ಡ ಗೆಲುವಾದರೂ ಅಂತರ್ಮುಖಿಯಾಗಿಬಿಡುತ್ತದೆ. ಒಮ್ಮೊಮ್ಮೆ ಜೀವನ  ಸಹಜ -ಸುಂದರ, ಅದ್ಭುತ!!. ಈ ಸಂಬಂಧ - ಬಾಂಧವ್ಯಗಳು ಎಷ್ಟು ಖುಷಿಯಾಗಿಸುತ್ತಪ್ಪಾ ಎಂದು ಉಬ್ಬಿ ಬಿಡುವ ನಾವುಗಳು; ಒಮ್ಮೊಮ್ಮೆ ತುಂಬಾ ವೇದಾಂತಿ ತತ್ವಜ್ಞಾನಿಯಂತೆ ಏನಿದೆ ಜೀವನದಲ್ಲಿ ಹುಟ್ಟು-ಸಾವುಗಳು ನಡುವಲ್ಲಿ ಸ್ವಲ್ಪದಿನ(ಜಟಕಾಬಂಡಿ) ಒಂದಷ್ಟು ಸ್ವಾರ್ಥ ದುರಾಸೆಗಳ ಜಂಜಾಟದ ಜಗಳಗಳು, ತುತ್ತಿಗಾಗಿ ಒಂದಷ್ಟು ಓದು - ನೌಕರಿ - ಪೆನ್ಷನ್ - ಲೈಫ್ settlement ಹೀಗೆ ಒಂದಷ್ಟು ಬದುಕಿನ ಹೋರಾಟ. ಇಷ್ಟಾದ ಮೇಲೂ ಈ ಜೀವನ ನಶ್ವರ; ಒಮ್ಮೊಮ್ಮೆ ನಾವು ಮನುಷ್ಯರಾಗಿದ್ದೇವೆ, ನಮಗೆ ನಮ್ಮದೇ ಒಂದಷ್ಟು ಸ್ವಾತಂತ್ರ್ಯ, ಮಾತುಗಳು ಬರ್ತಾವೆ, ಹಲವು ಭಾಷೆಗಳಲ್ಲಿ ಬರಿತೇವೆ, ಟೆಕ್ನಾಲಜಿ ಬೆಳೆಸಿದ್ದೇವೆ, ಕಂಪ್ಯೂಟರ್, ಮೊಬೈಲ್, ಉಪಗ್ರಹಗಳು ಅದೂ ಇದೂ ಒಂದಷ್ಟು ಮಣ್ಣು ಮಸಿ ಕಲ್ಪಿಸಿಕೊಂಡು ನಾವು ಲಕ್ಕಿಗಳು, ಬುದ್ದಿಜೀವಿ, ಶ್ರೇಷ್ಟರು ಎಂದು ಬಿರುದು ಕೊಟ್ಟು ಕೊಂಡು ಬಿಡುತ್ತೇವೆ. ಒಮ್ಮೊಮ್ಮೆ ಏನಪ್ಪಾ..??! ನಾವು ಒಂಥರಾ ಅವಲಕ್ಕಿಗಳೇ!! ಎಲ್ಲೆಡೆಯೂ ಸ್ವಾರ್ಥ, ಮೋಸ, ಕಪಟತನ, ಈ
ಹೊಲಸು ಪ್ರಾಣಿಗೆ ಇರುವಷ್ಟು ದುರಾಸೆ ಬೇರಾವ ಜೀವ ಪ್ರಭೇದಗಳಲ್ಲು ಇಲ್ಲವೆಂದೆನಿಸಿ ನಾವೇ ಹುಂಬರು, ಮೂರ್ಖರು ಎಂದೆನಿಸುವುದೂ ಉಂಟು. 

ಆಸೆಗಳು ಆಕಾಶದ ಹಾಗೆ. ಹಿಡಿಯಲಾಗದ ಹೊಳೆಯುವ ಗಂಟು. ಅದಕ್ಕಾಗಿಯೆ ಜನ ಆಕಾಶ ನೋಡಿ ಹತ್ತು ಹಲವು ಕಲ್ಪಿಸಿಕೊಂಡು ಕನಸಿನ ಪುಷ್ಪಕ ಕಟ್ಟುತ್ತಾರೆ. ತಾರೆಗಳ ಜೊತೆ, ಚಂದ್ರನ ಜೊತೆ ಸೇರುವ ಗೆಳೆತನದ ಅನುಭೂತಿಯ ಭಾವ ಹೊಂದುತ್ತಾರೆ. ಕಲ್ಪನೆಯ ಪ್ರೀತಿಸಿ, ಮೋಹಿಸುತ ಆರಾಧಿಸಿ ಕನಸಿನ ಬೃಂಗವ ಏರಿ ಕವಿ ಎನಿಸಿಕೊಂಡುಬಿಡುತ್ತಾರೆ. ರಕ್ತ ಒತ್ತುವ ಹೃದಯದಲ್ಲಿ ರಂಗೋಲಿ ಬರೆದು ಅವರು ಬಯಸುವ ಪ್ರೇಮದ ವಸ್ತುವ ಬರಮಾಡಿ ಕಲ್ಪನೆಯ ಕನಸಲ್ಲಿ ಕಳೆದುಹೋಗುತ್ತಾರೆ. ಅಯ್ಯೋ.. !!!  ಸಾಕಲ್ಲವೇ?? ಎಷ್ಟು ಅಂತ ಕಲ್ಪಿಸಿಕೊಂಡು ಕನಸ್ ಕಾಣೋದ್ ಹೇಳಿ?? ಕೆಲಸವಿಲ್ಲದಿದ್ರೆ ಆಗೋದ್ ಇದೆ ಅಲ್ಲವೇ ?? ಮತ್ತೇನಾಗುತ್ತೆ??


ಹಸಿರಾಗಿರಲಿ ಬದುಕು ಖುಷಿಯಲ್ಲಿ ಕರಗಿ..
ನೂರ್ಮಡಿಸಿ ಚಿಮ್ಮುತಿರಲಿ ಕನಸುಗಳ ಹುಚ್ಚಾಸೆಯ ಅಲೆಗಳು...


ಒಂದು ಪುಟ್ಟ ಆಸೆಯ
ಕನಸು
ಕನಸೊಳಗೆ ಕನಸುಗಳಿಗೆ
ಕಾವ್ ಕೊಟ್ಟು
ಹೊಸದತ್ತು ಕನಸುಗಳ
ಹುಟ್ಟಾಕಿ ಕನಸಲ್ಲಿ
ಆ ಕನಸಲ್ಲಿ ಹೊಸ
ಆಸೆಯ ಕನಸಿನ ಬೀಜ
ತಂತಾನೆ ಮೊಳೆತು ಸಸಿಯಾಗಿ
ಗಳಿಗೆಗಳಿಗೆಗಳೊಳಗೆ ಬೆಳೆಬೆಳೆದು
ಹೆಮ್ಮರವಾಗಿ ಆ ಕನಸೇ
ತನ್ನೊಳಗೆ ತನ್ನ ಕನಸನು
ಬೆಳೆಸುವ ಹುಚ್ಚಾಸೆಯ
ಇನ್ನೊಂದು ಕನಸನು ಕಂಡು
ಕಣ್ತೆರೆವ ಮನಸಿರದೆ
ಕನಸಾಗುತಿರುವಾಗ
ವಾಸ್ತವದ ನೆನಪ ಬರಿಸಿತು
ನನ್ನ ಹಿತ ಬಯಸುವ ಶತ್ರು
ಅಲರಾಂನ ಗಂಟೆ ಹೊಡೆದುಕೊಳ್ಳಬೇಕೆ??!!
ಗಂಟೆ ಏಳಾಯಿತು ಎಂದು
ಪಕ್ಕದ ಮನೆಯ ಆಂಟಿ
ಟ್ಯೂಶನ್ ಗೆ ಮಗನ ಕಳಿಸಿ
ಟಾಟಾ ಮಾಡುವ ಸೌಂಡು ಕಿವಿಗೆ
ಅಪ್ಪಳಿಸಿದಾಗಲೇ ನೆನಪಾದ್ದು
Sunday ಅಲ್ಲ ಇಂದು Monday ಎಂದು
.


HaPPy TiMeS....
         EnJoY ThE SwEeT DrEaMs..

Wednesday, 20 February 2013

ಮತ್ತೆ ಮರುಗದಿರು..



ಚಿಂತೆ ಮಾಡುವುದೇಕೆ
ಇಲ್ಲದುದರ ಬಗ್ಗೆ
ಸಿಕ್ಕಿರುವುದರ ಬಗೆಗೆ
ಯೋಚಿಸಿಯೇ ಹೆಮ್ಮೆಪಡು
ಇದ್ದುದನು ಅನುಭವಿಸಿ
ಸುಖಿಯಗಿರು ಗೆಲುವಾಗಿರು..

ಬಯಸಿ ಮರುಗಿದರೆ
ಕೊರಗುವುದು ನಿನ್ನ ಜೀವ 

ನಿನಗಿರುವ ಸವಿಸಮಯ
ವ್ಯರ್ಥವಾಗುವುದು
ಹುಂಬ ಗೊಂದಲಗಳಲಿ.

ದಿನಗಳು ಉರುಳುವವು
ಸದ್ದಾಗದಂತೆ
ಸುಳಿವಿಲ್ಲದೆ ಸರಿದಿವೆ
ತಾ ಕಾರಣಗಳ ಮರೆತಂತೆ!!
ಇದ್ದು ಬಿಡು ಓ ಮನಸೇ..
ನಿನ್ನ ಪಾಡಿಗೆ ನೀನು
ನನ್ನ ಹೃದಯಕೆ ತಿಳಿಯದಂತೆ.
ಕಳಿಸದಿರು ಭಾವಗಳ
ಅದು ನೊಂದು ಅಳುವಂತೆ
.
              --ಮೌನ ವೀಣೆ