Total Pageviews

Showing posts with label kavana. Show all posts
Showing posts with label kavana. Show all posts

Tuesday, 9 March 2021

ಮನಸ್ಸಿಗೊಂದು ರಿಲೇಕ್ಸ್ ಮಾತು

ಮನಸ್ಸಿಗೆ ಬೇಜಾರಾದಾಗ ಈ ಜೀವನವೇ ಸಾಕು ಎನ್ನಿಸಿಬಿಡುತ್ತದೆ.ಆದರೆ ನಮ್ಮ ಜವಾಬ್ದಾರಿಗಳನ್ನು ನೆನೆಪಿಸಿಕೊಂಡರೆ ಜೀವನ ಹಿಂಗೇ ಅಂತ ಅನಿಸುವುದೂ ಇದೆ. ನಮಗೆ ಎಲ್ಲರಿಗೂ ನಮ್ಮದೇ ಆದ ಕನಸಿನ ಲೋಕದಲ್ಲಿ ಬದುಕಬೇಕನಿಸುವುದು ನಿಜ ಆದರೆ ನೈಜ ಜೀವನ ಬರೀ ಕಲ್ಪನೆ, ಭ್ರಮೆಯಲ್ಲ. ವಾಸ್ತವದಲ್ಲಿ ನಾನು ನನ್ನದು ಎಂದು ಎಷ್ಟೇ ಹಾರಾಡಿದರೂ ಭಗವಂತ ಹಣೆಯಲ್ಲಿ ಅವರವರ ಪಾಲಿಗೆ ದಕ್ಕುವುದು ಇಷ್ಟು ಎಂದು ಬರೆದಿರುತ್ತಾನಂತೆ. ನಾವು ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದೇವೆ ಎಂಬ ನಂಬಿಕೆ ನಮ್ಮಲ್ಲಿದ್ದರೆ ಇತರರ ಮಾತಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ. ಎಲ್ಲವನ್ನೂ ಸಹಿಸುವ ಗುಣವಿದ್ದವರಲ್ಲಿ ಸಮಸ್ಯೆ ಮೆಟ್ಟಿ ನಿಟ್ಟುವ ಸ್ಟೈರ್ಯವಿರುತ್ತದೆ. ನಮಗೆ ಅವಶ್ಯವಿರುವಾಗ ಪಡೆದದ್ದು ಚಿಕ್ಕದಾದರೂ ಅಮೂಲ್ಯವಾಗಿರುತ್ತದೆ. ಕೊಟ್ಟವರನ್ನು ಮರೆಯಬಾರದು.

ಹೆದರಿ ನಿಂತರೆ ನಿಂತೇ ಇರುತ್ತೇವೆ ನಿಲ್ದಾಣದಂತೆ; ಮುನ್ನಡೆದರೆ ಆ ಪ್ರಯಾಣವೇ ಉಜ್ವಲ ಜೀವನ. ಮನುಷ್ಯ ತನ್ನ ಗುಣ ನಡತೆಯಿಂದ ದೊಡ್ಡವನಾಗಬಲ್ಲ ಹೊರತು ಆಸ್ತಿ ಹಣ ಅಂತಸ್ತಿನಿಂದಲ್ಲ ಎಂಬುದು ಮನದಲ್ಲಿರಲಿ, ನಮ್ಮ ಗುರಿ ಮುಟ್ಟುವುದಕ್ಕೆ ಉಪಯೋಗವಾಗುವ ಪ್ರತಿಕೆಲಸ ತ್ರಿಕರಣ ಶುದ್ಧಿಯಿಂದ ಮಾಡಬೇಕು. 

ಇತ್ತೀಚಿಗೆ ಓದಿದ ಸಾಲುಗಳಲ್ಲಿ ತುಂಬಾ ಹಿಡಿಸಿದ ಹಾಗೂ ತುಂಬಾ ಸಮಾಧಾನ ಕೊಟ್ಟ ಸಾಲುಗಳು -

ಕಾಣುವ ಕನಸಿಗೂ ಮೂಡುವ ಕಲ್ಪನೆಗೂ 
ಮುಂದಿನ ದಾರಿಯಾಗಲಿ ಪ್ರಶಾಂತ 
ಕಾಣದ ಬದುಕಿಗೂ ಮುಂದಿರುವ ವಾಸ್ತವಕೂ 
ಸಿದ್ಧವಿರಲಿ ಮನವೆಂದಿಗೂ ಶಾಂತ
ಮಧುರ ಭಾವನೆಯ ಸುಳಿಯ ಸಿಲುಕದೇ 
ಸಾಗುತಿರಲಿ ಪಯಣ ಪ್ರಶಾಂತ 
ತಲ್ಲಣಿಸದೇ ಮನವಿರಲಿ ಎಂದಿಗೂ 
ಬಿಳಿಹಾಲ ನೊರೆಯಂತೆ ಶಾಂತ. 

ಭಾವನೆಗಳ ಗೂಡಲ್ಲಿ 
ಬಗೆದಷ್ಟು ಹಾಡು
ಈ ಪ್ರೀತಿ ಒಲವೆಲ್ಲ 
ಮೊಗೆದಷ್ಟು ನೋಡು.

Sunday, 1 December 2013

ಪ್ರೀತಿ ಹಕ್ಕಿ



ನಿನ್ನ ಪ್ರೀತಿಯ ಹಕ್ಕಿ 
ಎನ್ನ ಜೀವದೊಳಹೊಕ್ಕಿ 
ತೆರೆಸಿತಲ್ಲವೋ ಇನಿಯ 
ನನ್ನಾಸೆಗಳೆಲ್ಲವ ಕುಕ್ಕಿ 

ನಿನ್ನ ಹೃದಯದ ಪುಟಕೆ 
ಮನದ ಭಾವನೆ ಬೆರೆಸಿ 
ಬರೆದೆ ಒಲುಮೆಯ ಕವನ 
ನಿನ್ನ ಒಲವನು ಬಯಸಿ 

ಮಾತು ಮೌನವಾಗುವ ತನಕ
ಹೃದಯ ಬಡಿತ ನಿಲ್ಲುವತನಕ 
ಈ ಜೀವ ಮಣ್ಣಿಗೆ ಸೇರುವ ತನಕ 
ಕೊಡಲಿ ಗೆಳೆಯ ನಿನ್ನ ಪ್ರೀತಿ 
ನನ್ನ ಮನದಲಿ ಪುಳಕ..
         -- ಮೌನವೀಣೆ

Wednesday, 30 October 2013

ಬೇಸರ




ಏಕೋ ಏನೋ ಮನಕೆ 
ಇಂದು ಗಾಯವಾಗಿದೆ 
ತೆರೆದು ನೋಡಲು 
ನನ್ನ ಹೃದಯ ಮಾಯವಾಗಿದೆ

ನಿನ್ನ ಪ್ರೀತಿ ಪಡೆದ ಜೀವ 
ಮುನಿಸ ತೋರಿದೆ 
ನಿನ್ನ ಸನಿಹ ಬೇಕು ಎಂದು 
ನನ್ನ ಕಾಡಿದೆ 

ಎಂದು ಬರುವೆ ಏನ ತರುವೆ 
ನನಗೆ ಹೇಳದೆ 
ಅಪ್ಪಿ ಬಿಟ್ಟು ಪಪ್ಪಿ ಕೊಡುವೆ       
ಮಾತೇ ಆಡದೆ
     
       -- ಮೌನವೀಣೆ

Thursday, 19 September 2013

ನನಗೆ ಪ್ರೀತಿಯಾಗಿದೆ!!!


ಮನಕೆ ಕಚಗುಳಿಯಾಗಿದೆ 
ಪ್ರಾಣಪಕ್ಷಿಯು ಕೂಗಿದೆ
ಒಲವ ಕನಸದು ಕಾದಿದೆ 
ಹೃದಯ ಪಲ್ಲವಿ ಹಾಡಿದೆ 
ಅಪರೂಪದ ಸಂಭ್ರಮ ತುಂಬಿದೆ 
ಸ್ವಾರ್ಥ ಗೋಪುರ ಕಳಚಿದೆ
ಮೌನ ಮಾತುಗಳಾಡಿದೆ 
ಗಗನ ಭೂಮಿಗೆ ಜಾರಿದೆ 
ಏನು ಕಾರಣ ಕೇಳಿದೆ?? 
ನಾಚಿ ಹೇಳಿದೆ ನಾನು..
ಅಂತೂ ಇಂತೂ ನನಗೆ 
ಪ್ರೀತಿಯಾಗಿದೆ!!

     --ಮೌನವೀಣೆ

Wednesday, 21 August 2013

ಇನಿದನಿ




ಇಂಪಾದ ಗಾನ ಕೇಳಿದಾಗೆಲ್ಲ
ಇನಿಯಾ ನಿನ್ನ 
ಇನಿದನಿಯ ಪಿಸುಮಾತು 
ಇಂಚಿಂಚಾಗಿ
ಇಳಿದು ಮನದೊಳಗೆ 
ಇಬ್ಬನಿಯ ಶುಷ್ಕದಲಿ
ಇಷ್ಟಿಷ್ಟೇ ತೋಯ್ದು ತೇವವಾದಂತೆ 
ಇಮ್ಮಡಿಸಿದವು ಆಸೆಗಳ
ಇಂಚರವಾಗಿ. . 


ಕಲ್ಪನೆಗಳ ಕವನಗಳು 
ಕನವರಿಕೆಯ ಕನಸುಗಳು 
ಕವಲೊಡೆದು ಕಾಡಿ 
ಕಟ್ಟಿಬಿಟ್ಟವು ಕಾಮನಬಿಲ್ಲ 
ಕನ್ನಡಿಯ ಅಂಚಲ್ಲಿ 
ಕಣ್ ಕೊರೈಸುವಂತೆ 
ಕದಡಿ ಹಲವು ಬಣ್ಣವಾಗಿ..  


ನೀ ಕೇಳಿದ ಒಗಟು
ನಿನ್ನಾಪ್ತತೆಯ ಭಾವುಕತೆ
ನೀಕೊಟ್ಟ ಮಾತು  
ನೀ ಬೆಸೆದ ಬಾಳ ಭಾಂದವ್ಯ
ನಿಸ್ವಾರ್ಥ ತುಂಬಿದ ಪ್ರೇಮ
ನಿನ್ನಾಗಿಸಿದೆ ನನ್ನ
ನಿಸ್ಸಂಶಯವಾಗಿ..

Wednesday, 3 July 2013

ಮೊದಲ ಮಾಸ

















ಮಧುರ ಮೈತ್ರಿಯ 
ಸವಿಮಧುವಿನ ಸಿಹಿಯ ಮೆಲ್ಲುತ್ತ 
ಮೆಲ್ಲನೆ ಜಾರಿದೆ ಮೊದಲ ಮಾಸ 
ಒಲವ ಮಾಧುರ್ಯದ ಕ್ಷಣಗಳು 
ಮನದ ಆಳದಿ ಮೌನ ಕೇಳಿದೆ 
ಕಳೆದುಹೋಯಿತೆ! 
ಮದುವೆಯಾಗಿ ತಿಂಗಳು!!?
ದಿನ ಕಳೆದಿದೆ ಕ್ಷಣದಂತೆ 
ಬಾಳ ನಂಟುಗಳೆಲ್ಲ ಗಂಟಾಗಿ 
ಒಟ್ಟಾಗಿ ಸುತ್ತಿದೆ 
ಅನುರಾಗ -ಅಭಿಮಾನ ಮಮತೆಯ 
ಕಡಲಿನ ಕಟ್ಟೆ ತನ್ನೊಳಗೆ ಒಡೆದಿದೆ
ಭಾವಗಳು ಪರವಶವಾಗಿ 
ಬಣ್ಣದೊಕುಳಿಯಾಗಿವೆ 
ಬದುಕಿನ ಪೂರ್ಣತೆಯ 
ಸಾರ್ಥಕ್ಯದೆಡೆಗೆ 
ಹಜ್ಜೆಗೆ ಗೆಜ್ಜೆ 
ಘಲ್ಲೆನ್ನುತ ಸಾಗಿದೆ 
ಪ್ರೀತಿ ರಾಘವನ ಒಲವಿನ 
ಕೊಳಲ ಹಾಡಿಗೆ ಮೌನವೀಣೆ
ಹಿತವಾಗಿ ನವಿರಾಗಿ ಮೀಟಿದೆ 

           -- ಮೌನವೀಣೆ



Thursday, 23 May 2013

ಸಾರ್ಥಕ ಬದುಕು



ನೀರಲ್ಲಿ ಅರಳಿದ
ಬಿಳಿಕಮಲದ ಮೊಗ್ಗೊಂದು
ನೂರ್ಮಡಿಸುವ ಆಸೆಯ
ಹೊತ್ತು ಅರಳುತಿದೆ ಬಿರಿದು
ಪಕಳೆಯಲಿ ನಸುಗೆಂಪು
ತನ್ನೊಳಗೆ ಹೊಸಕಂಪು
ತಂಗಾಳಿಯ ಹಿತಸ್ಪರ್ಷಕೆ
ನಗುನಗುತ ತಲೆದೂಗಿ
ಹೇಳಿದೆ ಭಾಸ್ಕರಗೆ ಶುಭೋದಯ..

ಬುಡದಲ್ಲಿ ಕರಿಗೆಸರು
ಸುತ್ತೆಲ್ಲ ಬಳ್ಳಿಗಳ ಅಡರು
ನಡುವಲ್ಲಿ ಪುಟ್ಟ
ಜೀವಿಗಳ ಸಂತಾನ
ಪರೋಪಕಾರಿಯು ಅಹುದು
ಹೂಗಳ ಅರಸಿ.

ಅಲೆಗಳ ಕುಲುಕಾಟ
ದೋಣಿಗಳ ತಿರುಗಾಟ
ಕೀಟಗಳದ್ದಂತೂ ಎಲೆ ಹೂವ
ಕೊರೆಯುತ ಆಹಾರದ ಹುಡುಕಾಟ
ಕ್ಷಮೆಯಾ ಧರಿತ್ರಿಯ ಮಗಳೇ
ನೀ ಸೌಖ್ಯಕಾರಿಣಿ.!

ಸೌಂದರ್ಯದ ರಾಶಿ ನೀ;
ರೂಪದಲಿ ರಾಣಿ .
ಸುರ-ದೇವತೆಗಳ ಆಸನವು
ನೀ ಚಂದ್ರಮುಖಿ
ಕ್ಷಣಿಕ ಬದುಕಲೂ ಪಡೆವೆ
ಸಾರ್ಥಕ್ಯದ ಪರಿಪೂರ್ಣತೆಯ
ಓ ಕಮಲವೇ ನೀ ನಿಜಕ್ಕೂ ಸೌಭಾಗ್ಯವತಿ.


                                 --- ಮೌನ ವೀಣೆ
ಚಿತ್ರ ಕೃಪೆ - ಅಂತರ್ಜಾಲ

Monday, 22 April 2013

ಬೆಳ್ಳಿ ಕಾಲೆಜ್ಜೆಗಳು




ಬೆಳ್ಳಿ ಹಿಮದೆದೆಯಲ್ಲಿ
ಬೆಚ್ಚಗಿನ ಪಾದವು ಸೋಕಲು
ಅಚ್ಚಾಯಿತು ಹೆಜ್ಜೆಯ ಗುರುತು
ಮೆಚ್ಚುಗೆಯ ಒಪ್ಪಿಗೆಯಂತೆ.

ಕುಡುಗುಡುವ ಚಳಿಗಾಳಿಯಲಿ
ಹೆಪ್ಪುಗಟ್ಟಿದ ಹಿಮಗಡ್ಡೆಗಳು
ಸಕ್ಕರೆಯ ಮಳೆಯಂತೆ
ಮುತ್ತಂತೆ ಬುವಿಗಿಳಿಯಲು
ಸ್ವರ್ಗ ಅನಿಸಿತು ಧರೆಯು
ದಂಗಾದೆ ಕ್ಷಣದಲ್ಲಿ!!

ಎನಿತು ಸೊಭಗಿನ ಧರಣಿ
ಎಲ್ಲಿ ನೋಡಿದರಲ್ಲಿ ತುಂಬಿ-
ತುಳುಕಿದಂತಿದೆ ಬಿಳಿಮಣಿ
ಮುಂದೆ ಸಾಗವ ಮನಸಲಿ 
ಇನ್ನಷ್ಟು ಮತ್ತಷ್ಟು...
ಬೆರಗುಗಳ ತುಡಿತಗಳು!!?

ಇನ್ನಷ್ಟು ಮುನ್ನಡೆವೆ
ಕಣ್ತುಂಬಿ ಮನತುಂಬಿ
ಸಂತಸದಿ ಕುಣಿದು
ಭೂರಮೆಗೆ ಮಣಿದು
ಆನಂದದಿ ನಾ ಹೇಳ್ವೆ
ನಾ ಮುಂದೆ ಬರುವೆ; ನನ್ನೊಳಗೆ ನಲಿವೆ
ಈ ಜಗವ ಮರೆವೆ..
ಇನ್ನೂ ಅನಿಸುತಿದೆ..

             --  ಮೌನ ವೀಣೆ
...............

ಮಯೂರ ಚಿತ್ರ ಕವನ ಸ್ಪರ್ಧೆಗಾಗಿ ಬರೆದದ್ದು, ಈ ತಿಂಗಳ ಮಯೂರ ಪತ್ರಿಕೆ ಪರೀಕ್ಷಿಸಲಿಲ್ಲ. ಪ್ರಶಸ್ತಿ ಗೆದ್ದಿಲ್ಲ ಅನಿಸತ್ತೆ. ಬಹುಮಾನ ಗೆದ್ದರೆ ಕಳಿಸುತ್ತಿದ್ದರು ಅಲ್ಲವೇ ? :-) ಆದರೆ ನನ್ನ ಬ್ಲಾಗಿನ ಬಂಧುಗಳಿಗಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸಿದ್ದೇನೆ. ಇದು ನಮ್ಮ ಪ್ರಕಾಶಣ್ಣನವರ ಚಿತ್ರ. ಅವರ ಅದ್ಭುತ ಚಿತ್ರ ಹವ್ಯಾಸಕ್ಕೆ ನನ್ನಕಡೆಯಿಂದ ಜೈ ಹೋ ಧನ್ಯವಾದ

Wednesday, 20 February 2013

ಮತ್ತೆ ಮರುಗದಿರು..



ಚಿಂತೆ ಮಾಡುವುದೇಕೆ
ಇಲ್ಲದುದರ ಬಗ್ಗೆ
ಸಿಕ್ಕಿರುವುದರ ಬಗೆಗೆ
ಯೋಚಿಸಿಯೇ ಹೆಮ್ಮೆಪಡು
ಇದ್ದುದನು ಅನುಭವಿಸಿ
ಸುಖಿಯಗಿರು ಗೆಲುವಾಗಿರು..

ಬಯಸಿ ಮರುಗಿದರೆ
ಕೊರಗುವುದು ನಿನ್ನ ಜೀವ 

ನಿನಗಿರುವ ಸವಿಸಮಯ
ವ್ಯರ್ಥವಾಗುವುದು
ಹುಂಬ ಗೊಂದಲಗಳಲಿ.

ದಿನಗಳು ಉರುಳುವವು
ಸದ್ದಾಗದಂತೆ
ಸುಳಿವಿಲ್ಲದೆ ಸರಿದಿವೆ
ತಾ ಕಾರಣಗಳ ಮರೆತಂತೆ!!
ಇದ್ದು ಬಿಡು ಓ ಮನಸೇ..
ನಿನ್ನ ಪಾಡಿಗೆ ನೀನು
ನನ್ನ ಹೃದಯಕೆ ತಿಳಿಯದಂತೆ.
ಕಳಿಸದಿರು ಭಾವಗಳ
ಅದು ನೊಂದು ಅಳುವಂತೆ
.
              --ಮೌನ ವೀಣೆ