Total Pageviews

Sunday, 1 December 2013

ಪ್ರೀತಿ ಹಕ್ಕಿ



ನಿನ್ನ ಪ್ರೀತಿಯ ಹಕ್ಕಿ 
ಎನ್ನ ಜೀವದೊಳಹೊಕ್ಕಿ 
ತೆರೆಸಿತಲ್ಲವೋ ಇನಿಯ 
ನನ್ನಾಸೆಗಳೆಲ್ಲವ ಕುಕ್ಕಿ 

ನಿನ್ನ ಹೃದಯದ ಪುಟಕೆ 
ಮನದ ಭಾವನೆ ಬೆರೆಸಿ 
ಬರೆದೆ ಒಲುಮೆಯ ಕವನ 
ನಿನ್ನ ಒಲವನು ಬಯಸಿ 

ಮಾತು ಮೌನವಾಗುವ ತನಕ
ಹೃದಯ ಬಡಿತ ನಿಲ್ಲುವತನಕ 
ಈ ಜೀವ ಮಣ್ಣಿಗೆ ಸೇರುವ ತನಕ 
ಕೊಡಲಿ ಗೆಳೆಯ ನಿನ್ನ ಪ್ರೀತಿ 
ನನ್ನ ಮನದಲಿ ಪುಳಕ..
         -- ಮೌನವೀಣೆ

Wednesday, 30 October 2013

ಬೇಸರ




ಏಕೋ ಏನೋ ಮನಕೆ 
ಇಂದು ಗಾಯವಾಗಿದೆ 
ತೆರೆದು ನೋಡಲು 
ನನ್ನ ಹೃದಯ ಮಾಯವಾಗಿದೆ

ನಿನ್ನ ಪ್ರೀತಿ ಪಡೆದ ಜೀವ 
ಮುನಿಸ ತೋರಿದೆ 
ನಿನ್ನ ಸನಿಹ ಬೇಕು ಎಂದು 
ನನ್ನ ಕಾಡಿದೆ 

ಎಂದು ಬರುವೆ ಏನ ತರುವೆ 
ನನಗೆ ಹೇಳದೆ 
ಅಪ್ಪಿ ಬಿಟ್ಟು ಪಪ್ಪಿ ಕೊಡುವೆ       
ಮಾತೇ ಆಡದೆ
     
       -- ಮೌನವೀಣೆ

Thursday, 19 September 2013

ನನಗೆ ಪ್ರೀತಿಯಾಗಿದೆ!!!


ಮನಕೆ ಕಚಗುಳಿಯಾಗಿದೆ 
ಪ್ರಾಣಪಕ್ಷಿಯು ಕೂಗಿದೆ
ಒಲವ ಕನಸದು ಕಾದಿದೆ 
ಹೃದಯ ಪಲ್ಲವಿ ಹಾಡಿದೆ 
ಅಪರೂಪದ ಸಂಭ್ರಮ ತುಂಬಿದೆ 
ಸ್ವಾರ್ಥ ಗೋಪುರ ಕಳಚಿದೆ
ಮೌನ ಮಾತುಗಳಾಡಿದೆ 
ಗಗನ ಭೂಮಿಗೆ ಜಾರಿದೆ 
ಏನು ಕಾರಣ ಕೇಳಿದೆ?? 
ನಾಚಿ ಹೇಳಿದೆ ನಾನು..
ಅಂತೂ ಇಂತೂ ನನಗೆ 
ಪ್ರೀತಿಯಾಗಿದೆ!!

     --ಮೌನವೀಣೆ

Wednesday, 21 August 2013

ಇನಿದನಿ




ಇಂಪಾದ ಗಾನ ಕೇಳಿದಾಗೆಲ್ಲ
ಇನಿಯಾ ನಿನ್ನ 
ಇನಿದನಿಯ ಪಿಸುಮಾತು 
ಇಂಚಿಂಚಾಗಿ
ಇಳಿದು ಮನದೊಳಗೆ 
ಇಬ್ಬನಿಯ ಶುಷ್ಕದಲಿ
ಇಷ್ಟಿಷ್ಟೇ ತೋಯ್ದು ತೇವವಾದಂತೆ 
ಇಮ್ಮಡಿಸಿದವು ಆಸೆಗಳ
ಇಂಚರವಾಗಿ. . 


ಕಲ್ಪನೆಗಳ ಕವನಗಳು 
ಕನವರಿಕೆಯ ಕನಸುಗಳು 
ಕವಲೊಡೆದು ಕಾಡಿ 
ಕಟ್ಟಿಬಿಟ್ಟವು ಕಾಮನಬಿಲ್ಲ 
ಕನ್ನಡಿಯ ಅಂಚಲ್ಲಿ 
ಕಣ್ ಕೊರೈಸುವಂತೆ 
ಕದಡಿ ಹಲವು ಬಣ್ಣವಾಗಿ..  


ನೀ ಕೇಳಿದ ಒಗಟು
ನಿನ್ನಾಪ್ತತೆಯ ಭಾವುಕತೆ
ನೀಕೊಟ್ಟ ಮಾತು  
ನೀ ಬೆಸೆದ ಬಾಳ ಭಾಂದವ್ಯ
ನಿಸ್ವಾರ್ಥ ತುಂಬಿದ ಪ್ರೇಮ
ನಿನ್ನಾಗಿಸಿದೆ ನನ್ನ
ನಿಸ್ಸಂಶಯವಾಗಿ..

Thursday, 25 July 2013

ಮನಸು ತುಂಬಿದೆ



ಮನತುಂಬ ಸವಿಗನಸು
ಎದೆತುಂಬ ಭಾವೋನ್ಮಾದ
ಹೊಸದೆನಿಸಿದೆ ಈ ಜಗವು
ಬಣ್ಣವಾಗುತಿದೆ ಬದುಕು
ಸೊಗಸೆನಿತಿಸುದೆ ಈ ಭೂಮಿ
ಆಪ್ತವೆನಿಸಿವೆ ಸಂಬಂಧಗಳು
ಅನಿಸುತಿದೆ ಬದಲಾವಣೆ
ನನ್ನ ತುಂಬಾ......

ಜೊತೆಗಾರನ ಬಾಂಧವ್ಯ
ಅಭಿಮಾನದಕ್ಕರೆಗಳು
ವಾತ್ಸಲ್ಯದಾಳದ ಮಮತೆ
ಕಣ್ಣು ತುಂಬುವ ಪ್ರೇಮ
ಒಟ್ಟಾಗಿ ಕಟ್ಟಿಕೊಟ್ಟಿವೆ
ನೂರ್ಮಡಿಸುವ 

ಗಗನ ಚುಂಬಿಸುವ
ಚೈತನ್ಯ ನನ್ನ ತುಂಬಾ......

ಸತ್ಯ-ಮಿಥ್ಯಗಳ
ಹಿರಿಮೆ-ಅರಿವಿನ ಗೋಜು
ಜಗದಳಲ ಗೊಂದಲಗಳು
ಬೇಡವೆಂದಿದೆ ಅಂತರ್ಯ
ಮರೆತಿರುವೆನೇ ನಾನು
ಜಗದ ಪರಿವ??!!
ಒಲವ ಕಾರ್ಮೋಡ ಕವಿದಿದೆ
ಈಗ ನನ್ನ ತುಂಬಾ......

ಹೃದಯದಲಿ ಪ್ರೀತಿ ಗುಪ್ತಗಾಮಿನಿಯಂತೆ
ಕನವರಿಸುತಲಿ ಹರಿಯುತಿದೆ.
ಬಾನ ಚಂದ್ರನ ಬೇಟಿಗೆ
ಮುಸ್ಸಂಜೆಯಲಿ ಕಡಲು ಹದವಾಗಿ ನಲಿದಂತೆ
ತಲ್ಲಣಿಸಿ ಕಾತರಿಸಿ..
ಅವನು ಬರುವಾ ಹೊತ್ತು
ಹೆಸರಿಲ್ಲದ ಪುಳಕಗಳು
ನನ್ನ ತುಂಬಾ......

Wednesday, 3 July 2013

ಮೊದಲ ಮಾಸ

















ಮಧುರ ಮೈತ್ರಿಯ 
ಸವಿಮಧುವಿನ ಸಿಹಿಯ ಮೆಲ್ಲುತ್ತ 
ಮೆಲ್ಲನೆ ಜಾರಿದೆ ಮೊದಲ ಮಾಸ 
ಒಲವ ಮಾಧುರ್ಯದ ಕ್ಷಣಗಳು 
ಮನದ ಆಳದಿ ಮೌನ ಕೇಳಿದೆ 
ಕಳೆದುಹೋಯಿತೆ! 
ಮದುವೆಯಾಗಿ ತಿಂಗಳು!!?
ದಿನ ಕಳೆದಿದೆ ಕ್ಷಣದಂತೆ 
ಬಾಳ ನಂಟುಗಳೆಲ್ಲ ಗಂಟಾಗಿ 
ಒಟ್ಟಾಗಿ ಸುತ್ತಿದೆ 
ಅನುರಾಗ -ಅಭಿಮಾನ ಮಮತೆಯ 
ಕಡಲಿನ ಕಟ್ಟೆ ತನ್ನೊಳಗೆ ಒಡೆದಿದೆ
ಭಾವಗಳು ಪರವಶವಾಗಿ 
ಬಣ್ಣದೊಕುಳಿಯಾಗಿವೆ 
ಬದುಕಿನ ಪೂರ್ಣತೆಯ 
ಸಾರ್ಥಕ್ಯದೆಡೆಗೆ 
ಹಜ್ಜೆಗೆ ಗೆಜ್ಜೆ 
ಘಲ್ಲೆನ್ನುತ ಸಾಗಿದೆ 
ಪ್ರೀತಿ ರಾಘವನ ಒಲವಿನ 
ಕೊಳಲ ಹಾಡಿಗೆ ಮೌನವೀಣೆ
ಹಿತವಾಗಿ ನವಿರಾಗಿ ಮೀಟಿದೆ 

           -- ಮೌನವೀಣೆ



Thursday, 23 May 2013

ಸಾರ್ಥಕ ಬದುಕು



ನೀರಲ್ಲಿ ಅರಳಿದ
ಬಿಳಿಕಮಲದ ಮೊಗ್ಗೊಂದು
ನೂರ್ಮಡಿಸುವ ಆಸೆಯ
ಹೊತ್ತು ಅರಳುತಿದೆ ಬಿರಿದು
ಪಕಳೆಯಲಿ ನಸುಗೆಂಪು
ತನ್ನೊಳಗೆ ಹೊಸಕಂಪು
ತಂಗಾಳಿಯ ಹಿತಸ್ಪರ್ಷಕೆ
ನಗುನಗುತ ತಲೆದೂಗಿ
ಹೇಳಿದೆ ಭಾಸ್ಕರಗೆ ಶುಭೋದಯ..

ಬುಡದಲ್ಲಿ ಕರಿಗೆಸರು
ಸುತ್ತೆಲ್ಲ ಬಳ್ಳಿಗಳ ಅಡರು
ನಡುವಲ್ಲಿ ಪುಟ್ಟ
ಜೀವಿಗಳ ಸಂತಾನ
ಪರೋಪಕಾರಿಯು ಅಹುದು
ಹೂಗಳ ಅರಸಿ.

ಅಲೆಗಳ ಕುಲುಕಾಟ
ದೋಣಿಗಳ ತಿರುಗಾಟ
ಕೀಟಗಳದ್ದಂತೂ ಎಲೆ ಹೂವ
ಕೊರೆಯುತ ಆಹಾರದ ಹುಡುಕಾಟ
ಕ್ಷಮೆಯಾ ಧರಿತ್ರಿಯ ಮಗಳೇ
ನೀ ಸೌಖ್ಯಕಾರಿಣಿ.!

ಸೌಂದರ್ಯದ ರಾಶಿ ನೀ;
ರೂಪದಲಿ ರಾಣಿ .
ಸುರ-ದೇವತೆಗಳ ಆಸನವು
ನೀ ಚಂದ್ರಮುಖಿ
ಕ್ಷಣಿಕ ಬದುಕಲೂ ಪಡೆವೆ
ಸಾರ್ಥಕ್ಯದ ಪರಿಪೂರ್ಣತೆಯ
ಓ ಕಮಲವೇ ನೀ ನಿಜಕ್ಕೂ ಸೌಭಾಗ್ಯವತಿ.


                                 --- ಮೌನ ವೀಣೆ
ಚಿತ್ರ ಕೃಪೆ - ಅಂತರ್ಜಾಲ