ಮನತುಂಬ ಸವಿಗನಸು ಎದೆತುಂಬ ಭಾವೋನ್ಮಾದ ಹೊಸದೆನಿಸಿದೆ ಈ ಜಗವು ಬಣ್ಣವಾಗುತಿದೆ ಬದುಕು ಸೊಗಸೆನಿತಿಸುದೆ ಈ ಭೂಮಿ ಆಪ್ತವೆನಿಸಿವೆ ಸಂಬಂಧಗಳು ಅನಿಸುತಿದೆ ಬದಲಾವಣೆ ನನ್ನ ತುಂಬಾ......
ಜೊತೆಗಾರನ ಬಾಂಧವ್ಯ ಅಭಿಮಾನದಕ್ಕರೆಗಳು ವಾತ್ಸಲ್ಯದಾಳದ ಮಮತೆ ಕಣ್ಣು ತುಂಬುವ ಪ್ರೇಮ ಒಟ್ಟಾಗಿ ಕಟ್ಟಿಕೊಟ್ಟಿವೆ ನೂರ್ಮಡಿಸುವ
ಗಗನ ಚುಂಬಿಸುವ ಚೈತನ್ಯ ನನ್ನ ತುಂಬಾ......
ಸತ್ಯ-ಮಿಥ್ಯಗಳ ಹಿರಿಮೆ-ಅರಿವಿನ ಗೋಜು ಜಗದಳಲ ಗೊಂದಲಗಳು ಬೇಡವೆಂದಿದೆ ಅಂತರ್ಯ ಮರೆತಿರುವೆನೇ ನಾನು ಜಗದ ಪರಿವ??!! ಒಲವ ಕಾರ್ಮೋಡ ಕವಿದಿದೆ ಈಗ ನನ್ನ ತುಂಬಾ......
ಹೃದಯದಲಿ ಪ್ರೀತಿ ಗುಪ್ತಗಾಮಿನಿಯಂತೆ ಕನವರಿಸುತಲಿ ಹರಿಯುತಿದೆ. ಬಾನ ಚಂದ್ರನ ಬೇಟಿಗೆ ಮುಸ್ಸಂಜೆಯಲಿ ಕಡಲು ಹದವಾಗಿ ನಲಿದಂತೆ ತಲ್ಲಣಿಸಿ ಕಾತರಿಸಿ.. ಅವನು ಬರುವಾ ಹೊತ್ತು ಹೆಸರಿಲ್ಲದ ಪುಳಕಗಳು ನನ್ನ ತುಂಬಾ......
ಬುಡದಲ್ಲಿ ಕರಿಗೆಸರು ಸುತ್ತೆಲ್ಲ ಬಳ್ಳಿಗಳ ಅಡರು ನಡುವಲ್ಲಿ ಪುಟ್ಟ ಜೀವಿಗಳ ಸಂತಾನ ಪರೋಪಕಾರಿಯು ಅಹುದು ಹೂಗಳ ಅರಸಿ.
ಅಲೆಗಳ ಕುಲುಕಾಟ ದೋಣಿಗಳ ತಿರುಗಾಟ ಕೀಟಗಳದ್ದಂತೂ ಎಲೆ ಹೂವ ಕೊರೆಯುತ ಆಹಾರದ ಹುಡುಕಾಟ ಕ್ಷಮೆಯಾ ಧರಿತ್ರಿಯ ಮಗಳೇ ನೀ ಸೌಖ್ಯಕಾರಿಣಿ.!
ಸೌಂದರ್ಯದ ರಾಶಿ ನೀ; ರೂಪದಲಿ ರಾಣಿ . ಸುರ-ದೇವತೆಗಳ ಆಸನವು ನೀ ಚಂದ್ರಮುಖಿ ಕ್ಷಣಿಕ ಬದುಕಲೂ ಪಡೆವೆ ಸಾರ್ಥಕ್ಯದ ಪರಿಪೂರ್ಣತೆಯ ಓ ಕಮಲವೇ ನೀ ನಿಜಕ್ಕೂ ಸೌಭಾಗ್ಯವತಿ. --- ಮೌನ ವೀಣೆ ಚಿತ್ರ ಕೃಪೆ - ಅಂತರ್ಜಾಲ
ಎನಿತು ಸೊಭಗಿನ ಧರಣಿ ಎಲ್ಲಿ ನೋಡಿದರಲ್ಲಿ ತುಂಬಿ- ತುಳುಕಿದಂತಿದೆ ಬಿಳಿಮಣಿ ಮುಂದೆ ಸಾಗವ ಮನಸಲಿ ಇನ್ನಷ್ಟು ಮತ್ತಷ್ಟು... ಬೆರಗುಗಳ ತುಡಿತಗಳು!!?
ಇನ್ನಷ್ಟು ಮುನ್ನಡೆವೆ ಕಣ್ತುಂಬಿ ಮನತುಂಬಿ ಸಂತಸದಿ ಕುಣಿದು ಭೂರಮೆಗೆ ಮಣಿದು ಆನಂದದಿ ನಾ ಹೇಳ್ವೆ ನಾ ಮುಂದೆ ಬರುವೆ; ನನ್ನೊಳಗೆ ನಲಿವೆ ಈ ಜಗವ ಮರೆವೆ.. ಇನ್ನೂ ಅನಿಸುತಿದೆ.. -- ಮೌನ ವೀಣೆ ............... ಮಯೂರ ಚಿತ್ರ ಕವನ ಸ್ಪರ್ಧೆಗಾಗಿ ಬರೆದದ್ದು, ಈ ತಿಂಗಳ ಮಯೂರ ಪತ್ರಿಕೆ ಪರೀಕ್ಷಿಸಲಿಲ್ಲ. ಪ್ರಶಸ್ತಿ ಗೆದ್ದಿಲ್ಲ ಅನಿಸತ್ತೆ. ಬಹುಮಾನ ಗೆದ್ದರೆ ಕಳಿಸುತ್ತಿದ್ದರು ಅಲ್ಲವೇ ? :-)
ಆದರೆ ನನ್ನ ಬ್ಲಾಗಿನ ಬಂಧುಗಳಿಗಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸಿದ್ದೇನೆ. ಇದು ನಮ್ಮ
ಪ್ರಕಾಶಣ್ಣನವರ ಚಿತ್ರ. ಅವರ ಅದ್ಭುತ ಚಿತ್ರ ಹವ್ಯಾಸಕ್ಕೆ ನನ್ನಕಡೆಯಿಂದ ಜೈ ಹೋ ಧನ್ಯವಾದ.